ಶಿವಣ್ಣನ ಕುರಿತಾಗಿ ಕುಮಾರ್ ಬಂಗಾರಪ್ಪ ಲಘು ಹೇಳಿಕೆ, ಅಭಿಮಾನಿಗಳು ಗರಂ
ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಶಿವರಾಜ್ ಕುಮಾರ್ ಬಗ್ಗೆ ಲಘುವಾದ ಪದ ಬಳಕೆ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಶಿವಣ್ಣ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಿಕೊಳ್ಳಲಿ ಎಂದಿದ್ದಾರೆ. ಇದು ಶಿವಣ್ಣ ಅಭಿಮಾನಿಗಳ ಕೆರಳಿಸಿದೆ.
ಶಿವರಾಜ್ ಕುಮಾರ್ (Shiva Rajkumar) ಬಗ್ಗೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಲಘುವಾದ ಹೇಳಿಕೆಗಳನ್ನು ನೀಡಿದ್ದು, ಇದು ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶಿವರಾಜ್ ಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಚುನಾವಣೆ ಪ್ರಚಾರದ ವೇಳೆ ಶಿವರಾಜ್ ಕುಮಾರ್ ಯಾವೊಬ್ಬ ರಾಜಕೀಯ ವ್ಯಕ್ತಿಯ ಪರವಾಗಿ ಅಥವಾ ವಿರೋಧವಾಗಿ ಮಾತನಾಡಿರಲಿಲ್ಲ. ಕೇವಲ ಗೀತಾ ಅವರಿಗೆ ಅವಕಾಶ ನೀಡಬೇಕೆಂದಷ್ಟೆ ಮನವಿ ಮಾಡಿದ್ದರು. ಸಾಧ್ಯವಾದಷ್ಟು ಸೌಹಾರ್ದ ರೀತಿಯ ಚುನಾವಣೆ ಪ್ರಚಾರವನ್ನೇ ಮಾಡಿದ್ದರು. ಹಾಗಿದ್ದರೂ ಸಹ ಎದುರಾಳಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಬಂಗಾರಪ್ಪ ಈಗ ಶಿವಣ್ಣನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
ಫೇಸ್ಬುಕ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕುಮಾರ್ ಬಂಗಾರಪ್ಪ, ತಮ್ಮ ಸಹೋದರ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಟೀಕಿಸಿರುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಅವರ ಬಗ್ಗೆ ಲಘುವಾಗಿ ಬರೆದಿದ್ದಾರೆ. ‘ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು’ ಎಂದಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೆ, ‘ನನ್ನ ತಂಗಿ (ಗೀತಾ ಶಿವರಾಜ್ ಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು’ ಎಂದು ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.
ಇದನ್ನೂ ಓದಿ:ನಡೆಯದ ಶಿವರಾಜ್ ಕುಮಾರ್ ಮ್ಯಾಜಿಕ್, ಗೀತಾ ಶಿವರಾಜ್ ಕುಮಾರ್ಗೆ ಸೋಲು
ಡಾ ರಾಜ್ಕುಮಾರ್ ಬಗ್ಗೆಯೂ ಪೋಸ್ಟ್ನಲ್ಲಿ ಉಲ್ಲೇಖ ಮಾಡಿರುವ ಕುಮಾರ್ ಬಂಗಾರಪ್ಪ, ‘ಕನ್ನಡದ ಕಣ್ಮಣಿ, ಡಾ ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ’ ಎಂದಿದ್ದಾರೆ. ಕುಮಾರ್ ಬಂಗಾರಪ್ಪ ಬಿಜೆಪಿ ಸದಸ್ಯರಾಗಿದ್ದು, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಜಯಗಳಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರಿಗೆ ಐದು ಲಕ್ಷಕ್ಕೂ ಹೆಚ್ಚು ಮತಗಳು ಲಭ್ಯವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ