80-90ರ ದಶಕದಲ್ಲಿ ಸ್ಟಾರ್ ನಟರುಗಳಷ್ಟೆ ಹೆಸರು ಮಾಡಿದ್ದ ಐಟಂ ಡ್ಯಾನ್ಸರ್ ಸಿಲ್ಕ್ ಸ್ಮಿತಾ (Silk Smitha). ಮಾದಕ ಚೆಲುವಿನ ಸಿಲ್ಕ್ ಸ್ಮಿತಾ ಆಗಿನ ಕಾಲದ ಯುವಕರಿಗೆ ಹುಚ್ಚು ಹಿಡಿಸಿದ್ದರು. ಕಷ್ಟಕರವಾದ ಬಾಲ್ಯ, ಯೌವ್ವನ ಎದುರಿಸಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಸಿಲ್ಕ್ ಸ್ಮಿತಾ, ಚಿತ್ರರಂಗದಲ್ಲಿ ಹೆಸರು ಗಳಿಸಲು ಸಹ ಅಷ್ಟೆ ಕಷ್ಟಪಟ್ಟವರು. ತೆರೆಯ ಮೇಲೆ ರಂಗು ರಂಗಾಗಿ ಕಾಣಿಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾರ ಖಾಸಗಿ ಜೀವನವೂ ರಂಗು ರಂಗಾಗಿಯೇ ಇದೆ. ಇದೇ ಕಾರಣಕ್ಕೆ ಈಗಾಗಲೇ ಕೆಲವರು ಸಿಲ್ಕ್ ಸ್ಮಿತಾರ ಜೀವನ ಆಧರಿಸಿ ಸಿನಿಮಾ ಮಾಡಿದ್ದಾರೆ. ಇದೀಗ ಮತ್ತೊಂದು ಸಿನಿಮಾ ನಿರ್ಮಾಣಗೊಳ್ಳಲು ಸಜ್ಜಾಗುತ್ತಿದೆ.
ಸಿಲ್ಕ್ ಸ್ಮಿತಾ ಜೀವನ ಕುರಿತಾದ ಹೊಸದೊಂದು ಸಿನಿಮಾ ಸೆಟ್ಟೇರಿದ್ದು ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾಕ್ಕೆ ‘ಸಿಲ್ಕ್ ಸ್ಮಿತಾ; ದಿ ಅನ್ಟೋಲ್ಡ್ ಸ್ಟೋರಿ’ ಎಂದು ಹೆಸರಿಡಲಾಗಿದ್ದು, ಸಿನಿಮಾವನ್ನು ಜಯರಾಂ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಆಗಿ ನಟಿ ಚಂದ್ರಿಕಾ ರವಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಎಸ್ಬಿ ಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.
ತಾವು ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸುತ್ತಿರುವ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಚಂದ್ರಿಕಾ ರವಿ, ‘‘ಸಾರ್ವಕಾಲಿಕ ಚೆಲುವೆ ಸಿಲ್ಕ್ ಸ್ಮಿತಾರ 63ನೇ ವರ್ಷದ ಹುಟ್ಟುಹಬ್ಬದಂದು, ಸಿಲ್ಕ್ ಸ್ಮಿತಾರ ಕುಟುಂಬದ ಆಶೀರ್ವಾದದೊಂದಿಗೆ ನಾವು ಸಿಲ್ಕ್ ಸ್ಮಿತಾರ ಕತೆಯನ್ನು ಪ್ರಪಂಚಕ್ಕೆ ಹೇಳಲು ಹೊರಟಿದ್ದೇವೆ’’ ಎಂದಿದ್ದಾರೆ. ಜೊತೆಗೆ ಸಿನಿಮಾದ ಮುಖ್ಯ ತಂತ್ರಜ್ಞರ ಹೆಸರುಗಳನ್ನು ಸಹ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:Art and Entertainment : ಯಾವುದು ಶೃಂಗಾರ ಯಾವುದು ಅಶ್ಲೀಲ, ನಿರ್ಧರಿಸುವವರು ಯಾರು?
ಸಿಲ್ಕ್ ಸ್ಮಿತಾ ಜೀವನ ಆಧರಿಸಿ ಈಗಾಗಲೇ ಕೆಲವು ಸಿನಿಮಾಗಳು ತೆರೆಗೆ ಬಂದಿವೆ. ವಿದ್ಯಾ ಬಾಲನ್ ನಟಿಸಿದ್ದ ‘ದಿ ಡರ್ಟಿ ಪಿಕ್ಚರ್’ ಸಖತ್ ಗಮನ ಸೆಳೆದಿತ್ತು. ಆ ಬಳಿಕ ಕನ್ನಡದಲ್ಲಿ ‘ಡರ್ಟಿ ಪಿಕ್ಚರ್ಸ್: ಸಿಲ್ಕ್ ಸಖತ್ ಹಾಟ್’ ಹೆಸರಿನ ಸಿನಿಮಾ ಬಂತು. ಸಿನಿಮಾದಲ್ಲಿ ಸಿಲ್ಕ್ ಪಾತ್ರದಲ್ಲಿ ಪಾಕ್ ನಟಿ ವೀಣಾ ಮಲ್ಲಿಕ್ ನಟಿಸಿದ್ದರು. ಮಲಯಾಳಂನಲ್ಲಿ ‘ಕ್ಲೈಮ್ಯಾಕ್ಸ್’ ಹೆಸರಿನ ಸಿನಿಮಾಮಾ ಸಿಲ್ಕ್ ಜೀವನದ ಆಧರದಲ್ಲಿ ಬಿಡುಗಡೆ ಆಯ್ತು. ಈಗ ಚಂದ್ರಿಕಾ ರವಿ ನಟನೆಯ ಸಿನಿಮಾ ಬರಲು ಸಜ್ಜಾಗಿದೆ.
ಸಿಲ್ಕ್ ಸ್ಮಿತಾ, 1979ರಲ್ಲಿ ಮಲಯಾಳಂನ ಸಿನಿಮಾ ಒಂದರ ಅತ್ಯಂತ ಸಣ್ಣ ಪಾತ್ರದಲ್ಲಿ ನಟನೆ ಆರಂಭಿಸಿದ ಸಿಲ್ಕ್ ಸ್ಮಿತಾ, ಅತ್ಯಂತ ವೇಗವಾಗಿ ಬೆಳೆಯುತ್ತಾ ಸಾಗಿದರು. ತಮ್ಮ ಮಾದಕ ಮೈಮಾಟ, ಮಾದಕ ನೋಟದಿಂದ ಪ್ರೇಕ್ಷಕರ ಮನಸ್ಸು ಗೆದ್ದ ಸಿಲ್ಕ್ ಸ್ಮಿತಾ ಐಟಂ ಹಾಡು, ಕ್ಯಾಬೆರೆ ನೃತ್ಯಗಳಿಗೆ ಜೀವ ತುಂಬುತ್ತಿದ್ದರು. ಮಲಯಾಳಂ ಮಾತ್ರವೇ ಅಲ್ಲದೆ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾಗೆ ಭಾರಿ ದೊಡ್ಡ ಬೇಡಿಕೆ ಸೃಷ್ಟಿಯಾಯಿತು. 1983ರ ಒಂದೇ ವರ್ಷದಲ್ಲಿ 43 ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದರು. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ 1996ರಲ್ಲಿ ನಿಧನ ಹೊಂದಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ