ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಕಲಾವಿದರು ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಬಾಡಿ ಟ್ರಾನ್ಸ್ಫಾರ್ಮೇಷನ್ನಿಂದ ಹಿಡಿದು ವಿವಿಧ ತರಬೇತಿಗಳನ್ನು ಪಡೆದುಕೊಳ್ಳುವವರೆಗೆ ಹಲವು ಕಸರತ್ತುಗಳನ್ನು ಮಾಡುತ್ತಾರೆ. ಇಷ್ಟೆಲ್ಲ ಮಾಡಿದ ನಟ-ನಟಿಯರಿಗೆ ಬೆಡ್ ರೂಂ ದೃಶ್ಯಗಳ ಶೂಟಿಂಗ್ ಸಂದರ್ಭದಲ್ಲಿ ಕಿರಿಕಿರಿ ಆಗುವುದುಂಟು. ಆದರೂ ಪಾತ್ರಕ್ಕಾಗಿ ಅಂಥ ದೃಶ್ಯದಲ್ಲಿ ನಟಿಸಬೇಕಾಗುವುದು ಅನಿವಾರ್ಯ. ಆ ಸಂದರ್ಭವನ್ನು ನಿರ್ವಹಣೆ ಮಾಡಲು ಇಂಟಿಮೆಸಿ ಕೋಆರ್ಡಿನೇಟರ್ (Intimacy Coordinator) ಎಂಬ ಹುದ್ದೆ ಸೃಷ್ಟಿ ಆಗಿದೆ. ಭಾರತೀಯ ಚಿತ್ರರಂಗಕ್ಕೆ ಇದು ಹೊಸ ಕಾನ್ಸೆಪ್ಟ್.
ಭಾರತದ ಮೊದಲ ಇಂಟಿಮೆಸಿ ಕೋಆರ್ಡಿನೇಟರ್ ಆಸ್ತಾ ಖನ್ನಾ!
ಮೀಟೂ ಅಭಿಯಾನ ಶುರುವಾದ ಇಂಟಿಮೆಸಿ ಕೋಆರ್ಡಿನೇಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಈಗೀಗ ಭಾರತೀಯ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲೂ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಆಸ್ತಾ ಖನ್ನಾ ಅವರು ಭಾರತದ ಮೊದಲ ಪ್ರಮಾಣಿಕೃತ ಇಂಟಿಮೆಸಿ ಕೋಆರ್ಡಿನೇಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಇತರರಿಗೂ ಅವರು ತರಬೇತಿ ನೀಡುತ್ತಿದ್ದಾರೆ.
ಇಂಥ ಒಂದು ಹುದ್ದೆ ಇದೆ ಎಂಬುದು ಆಸ್ತಾ ಖನ್ನಾ ಅವರಿಗೂ ತಿಳಿದಿರಲಿಲ್ಲ. ಬೆಡ್ ರೂಂ ದೃಶ್ಯಗಳನ್ನು ಹೇಗೆ ಚಿತ್ರಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಅಧ್ಯಯನ ನಡೆಸಿದಾಗ ಅವರಿಗೆ ಇಂಟಿಮೆಸಿ ಕೋಆರ್ಡಿನೇಟರ್ ಕೆಲಸದ ಬಗ್ಗೆ ತಿಳಿಯಿತು. ಭಾರತೀಯ ಚಿತ್ರರಂಗದಲ್ಲಿ ಈ ಹುದ್ದೆಯನ್ನು ಯಾರೂ ಸೂಕ್ತವಾಗಿ ನಿಭಾಯಿಸುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಅವರು ‘ಇಂಟಿಮೆಸಿ ಪ್ರೊಫೆಷನಲ್ಸ್ ಅಸೋಸಿಯೇಷನ್’ ಮೂಲಕ ಅವರು ತರಬೇತಿ ಪಡೆದುಕೊಂಡರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವವೂ ಅವರಿಗೆ ಇದೆ.
ಇಂಟಿಮೆಸಿ ಕೋಆರ್ಡಿನೇಟರ್ ಕೆಲಸ ಏನು?
ಬೆಡ್ ರೂಂ ದೃಶ್ಯಗಳಲ್ಲಿ ನಟ-ನಟಿಯರು ಅಭಿನಯಿಸುವಾಗ ಅವರಿಗೆ ಯಾವುದೇ ಮುಜುಗರ, ಕಿರುಕುಳ, ತೊಂದರೆ ಆಗದಂತೆ ನೋಡಿಕೊಳ್ಳುವುದು ಇಂಟಿಮೆಸಿ ಕೋಆರ್ಡಿನೇಟರ್ಗಳ ಕೆಲಸ. ಆ ದೃಶ್ಯ ಯಾಕೆ ಮುಖ್ಯ ಎಂಬುದನ್ನು ಎಲ್ಲ ನಟರಿಗೆ ಮತ್ತು ತಂತ್ರಜ್ಞರಿಗೆ ತಿಳಿಸಿ ಹೇಳಬೇಕು. ಅಂಥ ದೃಶ್ಯದಲ್ಲಿ ನಟಿಸುವ ಕಲಾವಿದರ ನಡುವೆ ಸೂಕ್ತ ಸಂವಹನ ಆಗುವಂತೆ ನೋಡಿಕೊಳ್ಳಬೇಕು. ಕಲಾವಿದರಿಗೆ ಏನಾದರೂ ಕಿರಿಕಿರಿ ಆದರೆ ಅವರು ದೂರು ನೀಡಲು ಅವಕಾಶ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಟ-ನಟಿಯರಿಗೆ ಒಪ್ಪಿಗೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅಂಥ ಎಲ್ಲ ದೃಶ್ಯಗಳು ಕೂಡ ಈ ಮೊದಲೇ ಪ್ಲ್ಯಾನ್ ಮಾಡಿದ ರೀತಿಯಲ್ಲಿ ಮಾತ್ರ ಚಿತ್ರೀಕರಣಗೊಳ್ಳಬೇಕು. ಹೀಗೆ ಹಲವು ಜವಾಬ್ದಾರಿಗಳನ್ನು ಇಂಟಿಮೆಸಿ ಕೋಆರ್ಡಿನೇಟರ್ಗಳು ನಿಭಾಯಿಸಬೇಕು.
ಬೆಡ್ ರೂಂ ದೃಶ್ಯಗಳಿಗೆ ಮಾತ್ರ ಈ ಹುದ್ದೆ ಸೀಮಿತವಲ್ಲ. ಐಟಂ ಡ್ಯಾನ್ಸ್ಗಳಲ್ಲಿ ನಟಿಯರು ಚಿಕ್ಕ ಬಟ್ಟೆ ಧರಿಸುವ ಅಗತ್ಯ ಇದ್ದರೆ ಅವರಿಗೆ ಕಿರಿಕಿರಿ ಆಗುವುದನ್ನು ತಪ್ಪಿಸುವಂತಹ ವಾತಾವರಣವನ್ನು ಇಂಟಿಮೆಸಿ ಕೋಆರ್ಡಿನೇಟರ್ಗಳು ನಿರ್ಮಿಸಬೇಕು. ಚಿಕ್ಕ ಮಕ್ಕಳು ದೊಡ್ಡವರ ಜೊತೆ ನಟಿಸುವಾಗ (ಉದಾಹರಣೆಗೆ ತಂದೆ-ಮಗಳ ದೃಶ್ಯಗಳಲ್ಲಿ) ತಬ್ಬಿಕೊಳ್ಳುವಂತಹ ಸನ್ನಿವೇಶಗಳಿದ್ದರೆ ಆಗಲೂ ಇಂಟಿಮೆಸಿ ಕೋಆರ್ಡಿನೇಟರ್ಗಳು ಇರಲೇಬೇಕು. ಹೀಗೆ ಸನ್ನಿವೇಶಕ್ಕೆ ಅನುಗುಣವಾಗಿ ಈ ಹುದ್ದೆಯ ಜವಾಬ್ದಾರಿ ದೊಡ್ಡದಾಗುತ್ತದೆ.
ಇದನ್ನೂ ಓದಿ:
‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’: ರಾಜ್ ಕುಂದ್ರಾ
‘ಬದುಕಿರುವುದಕ್ಕೆ ನಾನು ಅದೃಷ್ಟವಂತೆ’; ಗಂಡನ ನೀಲಿ ಚಿತ್ರ ಹಗರಣ ಬಯಲಾದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಮಾತು
Published On - 2:23 pm, Sat, 24 July 21