ನಟ ಅಜಿತ್ ಕುಮಾರ್ (Ajith Kumar) ಅವರು ಮಲ್ಟಿಟ್ಯಾಲೆಂಟೆಡ್. ನಟನೆ ಅಲ್ಲದೆ, ಹಲವು ಕ್ಷೇತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಈಗ ಶೂಟಿಂಗ್ ಸ್ಪರ್ಧೆಯಲ್ಲಿ ಆರು ಪದಕ ಗೆದ್ದಿದ್ದಾರೆ. 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅಜಿತ್ ಸ್ಪರ್ಧಿಯಾಗಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ನಾಲ್ಕು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಹಾಗೂ ಎರಡು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಸಿಕ್ಕಿದೆ. ಅವರ ಸಾಧನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೆಂಟರ್ ಫೈರ್ ಪಿಸ್ತೂಲ್ ಪುರುಷ ವಿಭಾಗ, ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗ, 50 ಮೀಟರ್ ಫ್ರೀ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಪುರುಷ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 50 ಮೀಟರ್ ಫ್ರೀ ಪಿಸ್ತೂಲ್ ಪುರುಷ ವಿಭಾಗ ಹಾಗೂ ಸ್ಟ್ಯಾಂಡರ್ಡ್ ಪಿಸ್ತೂಲ್ ಪುರುಷ ವಿಭಾಗದಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದಾರೆ.
ತಿರುಚಿ ರೈಫಲ್ ಕ್ಲಬ್ನಲ್ಲಿ ಈ ಸ್ಪರ್ಧೆ ನಡೆದಿದೆ. ಸ್ಪರ್ಧೆ ನಡೆಯುವ ಕಟ್ಟಡದ ಹೊರ ಭಾಗದಲ್ಲಿ ಅಜಿತ್ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಸೇರಿದ್ದರು. ಕಟ್ಟಡದಿಂದ ಅಜಿತ್ ಅವರು ಫ್ಯಾನ್ಸ್ ಕಡೆ ತಿರುಗಿ ಕೈ ಬೀಸುತ್ತಿದ್ದಂತೆ ನೆರೆದಿದ್ದ ಫ್ಯಾನ್ಸ್ ಜೋರಾಗಿ ಕೂಗಿದ್ದಾರೆ, ಸಿಳ್ಳೆ ಹೊಡೆದಿದ್ದಾರೆ. ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಸೇರಿದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ಅಜಿತ್ ಅವರು ಈ ರೀತಿ ಪ್ರಶಸ್ತಿ ಗೆಲ್ಲುತ್ತಿರುವುದು ಇದೇ ಮೊದಲೇನು ಅಲ್ಲ. ಕಳೆದ ವರ್ಷ ನಡೆದ ತಮಿಳುನಾಡು ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಹಲವು ಪ್ರಶಸ್ತಿಗಳನ್ನು ಅವರು ಬಾಚಿಕೊಂಡಿದ್ದರು. ಶೂಟಿಂಗ್ ಮಾತ್ರವಲ್ಲದೆ ಕಾರು ಹಾಗೂ ಬೈಕ್ ರೇಸಿಂಗ್ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ಡ್ರೋನ್ ಡಿಸೈನಿಂಗ್ ಕೂಡ ಮಾಡುತ್ತಾರೆ.
ಇದನ್ನೂ ಓದಿ: ಬೈಕ್ನಲ್ಲೇ ಅಜಿತ್ ಕುಮಾರ್ ಯುರೋಪ್ ಪರ್ಯಟನೆ; ವೈರಲ್ ಆಯ್ತು ಫೋಟೋ
ಸಿನಿಮಾ ವಿಚಾರಕ್ಕೆ ಬರೋದಾದರೆ ‘ವಲಿಮೈ’ ಚಿತ್ರದಲ್ಲಿ ಅಜಿತ್ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಗೆದ್ದು ಬೀಗಿತ್ತು. ಈ ಚಿತ್ರ ಎಚ್. ವಿನೋದ್ ನಿರ್ದೇಶನ ಹೇಳಿದ್ದರು. ಬೋನಿ ಕಪೂರ್ ಬಂಡವಾಳ ಹೂಡಿದ್ದರು. ಈ ಮೂವರು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ.