ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ: ಹಲವು ಕಷ್ಟ ಹೇಳಿಕೊಂಡ ದರ್ಶನ್

ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ದೀರ್ಘಕಾಲದ ಜೈಲುವಾಸದಿಂದ ವೃತ್ತಿ ಜೀವನಕ್ಕೆ ತೊಂದರೆ ಆಗಿದೆ. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ: ಹಲವು ಕಷ್ಟ ಹೇಳಿಕೊಂಡ ದರ್ಶನ್
Darshan Thoogudeepa
Edited By:

Updated on: May 03, 2026 | 5:09 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜಾಮೀನು (Bail) ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜಾಮೀನಿಗಾಗಿ ಅವರು ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದು, ಹತ್ತು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ ಹಾಕಲಾಗುತ್ತಿದೆ. ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ತಮ್ಮನ್ನು ಕ್ವಾರಂಟೈನ್ ಸೆಲ್​ನಲ್ಲಿಡಲಾಗಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾನಿಕಾರಕ ಪರಿಣಾಮವಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ (Darshan) ಅವರು ಕಷ್ಟ ಹೇಳಿಕೊಂಡಿದ್ದಾರೆ.

ಜೈಲಿನಲ್ಲಿ ಸಹ-ಕೈದಿಗಳು ನಿಂದನೆ, ಮೂದಲಿಸುವುದು ಸೇರಿ ಹಲವು ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಬಿಗಡಾಯಿಸಿದೆ. ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತಾರತಮ್ಯ ಮಾಡಲಾಗುತ್ತಿದೆ. ಕುಟುಂಬದವರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ. ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ. ಜೈಲು ಸೆಲ್​ನ ಕಾರಿಡಾರ್​​ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ. ಬೆನ್ನು ನೋವಿದ್ದರೂ ಕೇವಲ 2-3 ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.

ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗಿದೆ. ಪ್ರತಿ ವರ್ಷ 2 ಅಥವಾ 3 ಚಿತ್ರಗಳಿಗೆ ಸಹಿ ಮಾಡುತ್ತಿದ್ದೆ. ಜಾಮೀನು ರದ್ದುಪಡಿಸುವ ವೇಳೆಯೂ 3 ಸಿನಿಮಾಗಳಿಗೆ ಸಹಿ ಮಾಡಿದ್ದೆ. ಕೆವಿಎನ್ ಪ್ರೊಡಕ್ಷನ್ಸ್, ಮೀಡಿಯಾ ಹೌಸ್ ಸ್ಟೂಡಿಯೋಸ್​ನ ಸಿನಿಮಾಗಳಿಗೆ ಸಹಿ ಮಾಡಲಾಗಿತ್ತು. ನಿರ್ಮಾಪಕರು 6 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಜೈಲು ಸೇರಿದ್ದರಿಂದ ಸಿನಿಮಾ ನಿಂತುಹೋಗಿದೆ ಎಂದು ದರ್ಶನ್ ಸಮಸ್ಯೆ ಹೇಳಿಕೊಂಡಿದ್ದಾರೆ.

ಹೊಸ ಚಿತ್ರಗಳನ್ನೂ ಕಳೆದುಕೊಂಡಿರುವುದರಿಂದ ನಷ್ಟ ಆಗಿದೆ. ಸುದೀರ್ಘ ಜೈಲುವಾಸವು ವೃತ್ತಿಜೀವನಕ್ಕೆ ಮರಣಗಂಟೆಯಾಗಲಿದೆ. ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗಲಿದೆ. 262 ಸಾಕ್ಷಿಗಳ ವಿಚಾರಣೆ ಆಗಬೇಕೆಂದು ಆರೋಪಪಟ್ಟಿ ಸಲ್ಲಿಸಲಾಗಿದೆ. 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಆಗಿದೆ
ಶೀಘ್ರದಲ್ಲಿ ಸಾಕ್ಷ್ಯ ವಿಚಾರಣೆ ಮುಗಿಯುವ ಲಕ್ಷಣಗಳಿಲ್ಲ. ಹೀಗಾಗಿ ಜಾಮೀನು ನೀಡುವಂತೆ ದರ್ಶನ್ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ಸುಪ್ರೀಂಕೋರ್ಟ್ ಮೊರೆ ಹೋದ ದರ್ಶನ್

ಸೋಮವಾರ (ಮೇ 4) ಸುಪ್ರೀಂಕೋರ್ಟ್​​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಮೊದಲು ಅವರಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಲಾಗಿತ್ತು. ಈ ಬಾರಿ ಅವರಿಗೆ ರಿಲೀಫ್ ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:08 pm, Sun, 3 May 26

Follow Us