ಪ್ರಭಾಸ್ (Prabhas) ನಾಯಕನಾಗಿ ನಟಿಸಿರುವ, ಓಂ ರಾವತ್ ನಿರ್ದೇಶನದ ‘ಆದಿಪುರುಷ’ ಸಿನಿಮಾ ಜೂನ್ 16 ರಂದು ತೆರೆಗೆ ಬಂತು. ಈ ಸಿನಿಮಾ ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳ ಕೇಂದ್ರವಾಗಿದೆ. ಒಂದೆಡೆ ಅದ್ದೂರಿ ಕಲೆಕ್ಷನ್ ಮಾಡುತ್ತಿದೆ. ಮತ್ತೊಂದು ಕಡೆ ‘ಆದಿಪುರುಷ’ (Adipurush Movie) ಚಿತ್ರಕ್ಕೆ ಟೀಕೆಗಳು ಎದುರಾಗುತ್ತಿವೆ. ಚಿತ್ರದಲ್ಲಿರುವ ಡೈಲಾಗ್ ಬದಲಿಸಲು ಚಿತ್ರತಂಡ ನಿರ್ಧರಿಸಿದೆ. ಈ ರೀತಿಯ ವಿವಾದಗಳು ಉಂಟಾಗಲಿವೆ ಎಂಬುದು ನಿರ್ಮಾಪಕ ದಿಲ್ ರಾಜುಗೆ ಮೊದಲೇ ಗೊತ್ತಾಗಿತ್ತು ಎನ್ನಲಾಗಿದೆ. ಅವರು ಈ ಚಿತ್ರದ ಹಂಚಿಕೆ ಮಾಡಲು ನಿರಾಕರಿಸಿದ್ದರು.
‘ಆದಿಪುರುಷ್’ ತೆಲುಗು ರಾಜ್ಯಗಳ ಹಕ್ಕನ್ನು ಯುವಿ ಕ್ರಿಯೇಷನ್ಸ್ ಪಡೆದುಕೊಳ್ಳಲು ಬಯಸಿತ್ತು. ಆದರೆ ಈ ರೇಸ್‌ನಿಂದ ಅವರು ಹಿಂದೆ ಸರಿದರು. ಇದಾದ ಕೆಲವೇ ದಿನಗಳಲ್ಲಿ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ 185 ಕೋಟಿ ರೂಪಾಯಿ ನೀಡಿ ಇದರ ತೆಲುಗು ಹಕ್ಕನ್ನು ಪಡೆಯಿತು. ಈ ಬೆಳವಣಿಗೆಗಳ ಮಧ್ಯೆ ನಿರ್ಮಾಪಕ ದಿಲ್ ರಾಜುಗೆ ಸಿನಿಮಾದ ಹಂಚಿಕೆ ಹಕ್ಕಿನ ಆಫರ್ ಹೋಗಿತ್ತು. ಆದರೆ ಅವರು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಕೊನೆಗೆ ದಿಲ್ ರಾಜು ನಿಜಾಮ್ ಭಾಗದ ಹಕ್ಕು ಪಡೆದುಕೊಳ್ಳಲೂ ಮುಂದಾಗಲಿಲ್ಲ. ಈ ಮೂಲಕ ಅವರು ಬಚಾವ್ ಆಗಿದ್ದಾರೆ ಎನ್ನಲಾಗುತ್ತಿದೆ.
‘ಆದಿಪುರುಷ್’ ಸಿನಿಮಾ ಕಳೆದ ಮೂರು ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಆದರೆ, ಇಂದಿನಿಂದ (ಜೂನ್ 19) ಸಿನಿಮಾದ ಕಲೆಕ್ಷನ್ ಡಲ್ ಹೊಡೆಯೋದು ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ, ಹಂಚಿಕೆದಾರರು ನಷ್ಟ ಅನುಭವಿಸಲೂ ಬಹುದು.
ಇದನ್ನೂ ಓದಿ: ಯಶ್ ಮಾತ್ರವಲ್ಲ ಪ್ರಭಾಸ್ ಜೊತೆಗೂ ದಿಲ್ ರಾಜು ಸಿನಿಮಾ, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾ ಹೆಸರು ಘೋಷಣೆ
ಈಗಾಗಲೇ ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ನಿರ್ಮಾಣ ಮಾಡಿ ಸುಮಾರು 30 ಕೋಟಿ ರೂಪಾಯಿವರೆಗೆ ದಿಲ್ ರಾಜು ನಷ್ಟ ಅನುಭವಿಸಿದ್ದಾರೆ. ಮತ್ತೆ ರಿಸ್ಕ್ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ‘ಆದಿಪುರುಷ್’ ಚಿತ್ರದ ಹಕ್ಕು ನಿರಾಕರಿಸಿದ್ದಾರೆ ಎನ್ನುತ್ತವೆ ಮೂಲಗಳು. ಈ ಮೊದಲು ರಿಲೀಸ್ ಆದ ‘ಆದಿಪುರುಷ್’ ಟೀಸರ್ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ದಿಲ್ ರಾಜು ನಿರ್ಧಾರ ಬದಲಿಸಿದ್ದರು ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದೀರ್ಘಾವಧಿಯಲ್ಲಿ ಸಿನಿಮಾ ಎಷ್ಟರ ಮಟ್ಟಿಗೆ ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ