ಸೈನಾ ನೆಹ್ವಾಲ್​ ಬಗ್ಗೆ ಕೆಟ್ಟ ಜೋಕ್​: ಬಹಿರಂಗವಾಗಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಸಿದ್ದಾರ್ಥ್​; ಪತ್ರ ವೈರಲ್​​

‘ಡಿಯರ್​ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್​ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್​ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್​ ಪತ್ರ ಬರೆದಿದ್ದಾರೆ. ಆ ಲೆಟರ್​ ವೈರಲ್​ ಆಗಿದೆ.

ಸೈನಾ ನೆಹ್ವಾಲ್​ ಬಗ್ಗೆ ಕೆಟ್ಟ ಜೋಕ್​: ಬಹಿರಂಗವಾಗಿ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಸಿದ್ದಾರ್ಥ್​; ಪತ್ರ ವೈರಲ್​​
ಸಿದ್ದಾರ್ಥ್, ಸೈನಾ ನೆಹ್ವಾಲ್​

ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತ ನಟ ಸಿದ್ದಾರ್ಥ್ (Actor Siddharth)​ ಅವರು ತಮ್ಮ ಸಿದ್ಧಾಂತಗಳ ಕಾರಣಕ್ಕೆ ಆಗಾಗ ಕಿರಿಕ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal)​ ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್​ ಮಾಡಿದ್ದರು. ಅದಕ್ಕೆ ಅನೇಕರಿಂದ ಖಂಡನೆ ವ್ಯಕ್ತವಾಗಿತ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಈ ಟ್ವೀಟ್​ ಇದೆ ಎಂದು ಮಹಿಳಾ ಆಯೋಗ ಕೂಡ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಾರ್ಥ್​ ಅವರು ಕ್ಷಮೆ ಕೇಳಿದ್ದಾರೆ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಬಹಿರಂಗವಾಗಿಯೇ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಅವರು ಟ್ವಿಟರ್​ನಲ್ಲಿ (Siddharth Twitter) ಹಂಚಿಕೊಂಡಿದ್ದು, ವೈರಲ್​ ಆಗಿದೆ.

‘ಡಿಯರ್​ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್​ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್​ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಮತ್ತು ಸಿಟ್ಟು ಕೂಡ ನಾನು ಬಳಸಿದ ಪದಗಳು ಹಾಗೂ ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್​ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್​ ಅಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್​ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ಗೆ ಭೇಟಿ ನೀಡಿದ್ದಾಗ ಆದ ಭದ್ರತಾ ಲೋಪದ ಕುರಿತು ಕಳವಳ ವ್ಯಕ್ತಪಡಿಸಿ ಸೈನಾ ನೆಹ್ವಾಲ್​ ಅವರು ಟ್ವೀಟ್​ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದಾರ್ಥ್​ ಅವರು ಅವಹೇಳನಕಾರಿ ಪದಗಳನ್ನು ಬಳಸಿದ್ದರು.

ಸೈನಾ ನೆಹ್ವಾಲ್​ ತಂದೆ ಹರ್ವೀರ್ ಸಿಂಗ್ ಕಿಡಿ:

ಸಿದ್ದಾರ್ಥ್​ ಮಾಡಿದ ಅವಹೇಳನಕಾರಿ ಟ್ವೀಟ್ ಕುರಿತಂತೆ ಸೈನಾ ನೆಹ್ವಾಲ್ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘ಸೈನಾ ದೇಶಕ್ಕೆ ಪದಕಗಳನ್ನು ಗೆದ್ದುಕೊಟ್ಟಿದ್ದಾಳೆ. ಆ ನಟ ದೇಶಕ್ಕೆ ಏನು ಮಾಡಿದ್ದಾರೆ? ಎಂದು ಹರ್ವೀರ್ ಪ್ರಶ್ನಿಸಿದ್ದರು. ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ಹರ್ವೀರ್, ‘ನನ್ನ ಮಗಳ ಕುರಿತಾಗಿ ಅಂತಹ ಮಾತುಗಳನ್ನು ಕೇಳಿದಾಗ ಬಹಳ ಬೇಸರವಾಯಿತು. ಆಕೆ ದೇಶದ ಪರ ಆಟವಾಡಿ ಪದಕಗಳನ್ನು ಗೆದ್ದಿದ್ದಾಳೆ. ದೇಶದ ಹೆಮ್ಮೆ ಹೆಚ್ಚಿಸಿದ್ದಾಳೆ. ದೇಶಕ್ಕಾಗಿ ಸಿದ್ದಾರ್ಥ್​ ಏನು ಮಾಡಿದ್ದಾರೆ?’ ಎಂದು ಖಾರವಾಗಿ ಪ್ರಶ್ನಿಸಿದ್ದರು.

Click on your DTH Provider to Add TV9 Kannada