ಕೊವಿಡ್​ ಲಸಿಕೆ ಪಡೆದ ಮರುದಿನವೇ ನಟ ವಿವೇಕ್​ಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು

|

Updated on: Apr 16, 2021 | 2:01 PM

Actor Vivekh Heart Attack: 59 ವರ್ಷ ವಯಸ್ಸಿನ ನಟ ವಿವೇಕ್​ ಅವರು ಗುರುವಾರವಷ್ಟೇ (ಏ.15) ಕೊರೊನಾ ವೈರಸ್​ ಲಸಿಕೆ ಪಡೆದುಕೊಂಡಿದ್ದರು. ಕಾಕತಾಳೀಯ ಎಂಬಂತೆ ಮರುದಿನವೇ ಅವರಿಗೆ ಹೃದಯಾಘಾತ ಸಂಭವಿಸಿದೆ.

ಕೊವಿಡ್​ ಲಸಿಕೆ ಪಡೆದ ಮರುದಿನವೇ ನಟ ವಿವೇಕ್​ಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು
(ನಟ ವಿವೇಕ್​)
Follow us on

ಕಾಲಿವುಡ್​ನ ಖ್ಯಾತ ನಟ ವಿವೇಕ್​ ಅವರಿಗೆ ಶುಕ್ರವಾರ (ಏ.16) ಹೃದಯಾಘಾತ ಸಂಭವಿಸಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವೇಕ್​ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದೆ. ಶುಕ್ರವಾರ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಮತ್ತು ಆಂಜಿಯೋಗ್ರಾಮ್​ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

59 ವರ್ಷ ವಯಸ್ಸಿನ ವಿವೇಕ್​ ಅವರು ಗುರುವಾರವಷ್ಟೇ ಕೊರೊನಾ ವೈರಸ್​ ಲಸಿಕೆ ಪಡೆದುಕೊಂಡಿದ್ದರು. ಕಾಕತಾಳೀಯ ಎಂಬಂತೆ ಮರುದಿನವೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೊರೊನಾ ವ್ಯಾಕ್ಸಿನ್​​ ಪಡೆದುಕೊಂಡಿದ್ದಕ್ಕೂ, ಹೃದಯಾಘಾತ ಆಗಿರುವುದಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂಬ ಬಗ್ಗೆ ಯಾರೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಗುರುವಾರ ವಾಕ್ಸಿನ್​ ಪಡೆದುಕೊಂಡ ನಂತರ ಮಾಧ್ಯಮಗಳ ಜೊತೆ ವಿವೇಕ್​ ಮಾತನಾಡಿದ್ದರು. ‘ಮಾಸ್ಕ್​ ಧರಿಸುವುದು, ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಸುರಕ್ಷಿತವಾಗಿರಬಹುದು. ​ವೈದ್ಯಕೀಯವಾಗಿ ರಕ್ಷಿಸಿಕೊಳ್ಳಲು ವ್ಯಾಕ್ಸಿನ್​ ಪಡೆಯಬೇಕು. ನೀವು ಆಯುರ್ವೇದ ಮುಂತಾದ ಚಿಕಿತ್ಸೆ ಪಡೆಯುತ್ತಿದ್ದರೂ ಒಳ್ಳೆಯದು. ಅವೆಲ್ಲವೂ ಹೆಚ್ಚುವರಿ ಕ್ರಮಗಳು. ನಮ್ಮ ಜೀವ ಉಳಿಸುವುದು ವ್ಯಾಕ್ಸಿನ್​ ಮಾತ್ರ’ ಎಂದು ವಿವೇಕ್​ ಹೇಳಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ವಿವೇಕ್​ ಅವರು ಟ್ವಿಟರ್​ ಮೂಲಕ ವೈದ್ಯರಿಗೆ ಧನ್ಯವಾದ ತಿಳಿಸಿದ್ದರು. ಮರುದಿನವೇ ಅವರಿಗೆ ಹೃದಯಾಘಾತ ಸಂಭವಿಸಿರುವುದು ಶಾಕಿಂಗ್​ ಸಂಗತಿ. ಬಾಲಿವುಡ್​ನ ‘ವಿಕ್ಕಿ ಡೋನರ್​’ ಚಿತ್ರದ ತಮಿಳು ರಿಮೇಕ್​ ಆದಂತಹ ‘ಧಾರಾಳ ಪ್ರಭು’ ಚಿತ್ರದಲ್ಲಿ ವಿವೇಕ್​ ಕೊನೇ ಬಾರಿಗೆ ನಟಿಸಿದ್ದರು.

ಕಳೆದ ವರ್ಷ ಲಾಕ್​ ಡೌನ್​ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಧಾರಾಳ ಪ್ರಭು ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರಕ್ಕೆ ಹೊಡೆದ ಬಿತ್ತು. ಕಮಲ್​ ಹಾಸನ್​ ಅಭಿನಯದ ಬಹುನಿರೀಕ್ಷಿತ ‘ಇಂಡಿಯನ್​ 2’ ಸಿನಿಮಾದಲ್ಲೂ ವಿವೇಕ್​ ನಟಿಸುತ್ತಿದ್ದರು. ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಇದನ್ನೂ ಓದಿ: ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ; ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು ಎಂದ ಸಚಿವ ಡಾ. ಕೆ.ಸುಧಾಕರ್

(Actor Vivekh admitted to private hospital in Chennai due to heart attack after taking Corona vaccine)