ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್: ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ನಟಿ ನಿಧಿ ಅಗರ್ವಾಲ್

ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ನಿಧಿ ಅಗರ್​ವಾಲ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ ಕಾರಣಕ್ಕೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂದು (ಆಗಸ್ಟ್ 19) ವಿಚಾರಣೆ ಸಲುವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಅವರು ಹಾಜರಾಗಿದ್ದಾರೆ.

ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್: ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ನಟಿ ನಿಧಿ ಅಗರ್ವಾಲ್
Nidhhi Agerwal

Updated on: Aug 19, 2026 | 5:47 PM

ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟದ ಆ್ಯಪ್‌ಗಳ ಪ್ರಚಾರಕ್ಕೆ (Illegal Betting App Case) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖ್ಯಾತ ನಟಿ ನಿಧಿ ಅಗರ್ವಾಲ್ ಅವರು ಜಾರಿ ನಿರ್ದೇಶನಾಲಯದ (ED) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತೀಚೆಗಷ್ಟೇ ನಟ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಿಧಿ ಅಗರ್ವಾಲ್ (Nidhhi Agerwal) ಅವರು ಬುಧವಾರ (ಆಗಸ್ಟ್ 19) ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದಾರೆ.

ಮಾಸ್ಕ್ ಧರಿಸಿ ಇಡಿ ಕಚೇರಿಗೆ ಆಗಮಿಸಿದ ನಟಿ ನಿಧಿ ಅಗರ್ವಾಲ್ ಅವರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಒಳಗಡೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದವರ ಹಾಗೂ ಪಾಪರಾಜಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು. ಈ ಹಿಂದೆ ಹೈದರಾಬಾದ್ ಸಿಐಡಿ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ ಕೆಲವು ತಿಂಗಳುಗಳ ನಂತರ ಇದೀಗ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

21ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಸಂಕಷ್ಟ:

ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ನಿಯಂತ್ರಣ ಹಾಗೂ ಅವುಗಳ ಪ್ರಚಾರದ ಕುರಿತು ತನಿಖೆ ತೀವ್ರಗೊಂಡಿದ್ದು, ಇದುವರೆಗೆ ಒಟ್ಟು 21ಕ್ಕೂ ಹೆಚ್ಚು ಚಿತ್ರರಂಗದ ಪ್ರಮುಖ ನಟ-ನಟಿಯರು ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ತೆಲಂಗಾಣ ಪೊಲೀಸರು ಜೂಜಾಟದ ಆ್ಯಪ್‌ಗಳನ್ನು ಉತ್ತೇಜಿಸಿದ ಆರೋಪದ ಮೇಲೆ ಸಾಲು ಸಾಲು ಸೆಲೆಬ್ರಿಟಿಗಳ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು.

ಹೈದರಾಬಾದ್‌ನ ಮಿಯಾಪುರ್ ಠಾಣೆಯಲ್ಲಿ ದೂರು:

ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ 32 ವರ್ಷದ ಉದ್ಯಮಿ ಪಿ.ಎಂ. ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಈ ಎಫ್‌ಐಆರ್ ದಾಖಲಾಗಿತ್ತು. ಗಣ್ಯರು ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವಿಗಳು ಸಾರ್ವಜನಿಕ ಜೂಜಾಟ ಕಾಯ್ದೆ 1867ಕ್ಕೆ ವಿರುದ್ಧವಾಗಿರುವ ಇಂತಹ ಅಪಾಯಕಾರಿ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು

ತಮ್ಮ ವ್ಯಾಪ್ತಿಯ ಯುವಜನರು ಸೋಷಿಯಲ್ ಮೀಡಿಯಾದಲ್ಲಿ ನಟ-ನಟಿಯರು ನೀಡಿದ ಜಾಹೀರಾತುಗಳನ್ನು ನೋಡಿ ಆಕರ್ಷಿತರಾಗಿ ಈ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಪಿ.ಎಂ. ಫಣೀಂದ್ರ ಶರ್ಮಾ ಅವರು ದೂರು ನೀಡಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ಕೈಗೆತ್ತಿಕೊಂಡಿದ್ದು, ಸೆಲೆಬ್ರಿಟಿಗಳಿಗೆ ಸಂಕಷ್ಟ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us