ನಿಧಿ ಅಗರ್ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು
ತೆಲುಗಿನ ‘ದಿ ರಾಜಾ ಸಾಬ್’ ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದ ವೇಳೆ ಈ ಕಹಿ ಘಟನೆ ನಡೆದಿದೆ. ಈ ಸಿನಿಮಾದ ನಟಿ ನಿಧಿ ಅಗರ್ವಾಲ್ ಜೊತೆ ಕೆಲವರು ಅನುಚಿತವಾಗಿ ವರ್ತಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಈಗಾಗಲೇ ತನಿಖೆ ಆರಂಭಿಸಿದ್ದಾರೆ.

ನಟಿ ನಟಿ ನಿಧಿ ಅಗರ್ವಾಲ್ (Nidhi Agarwal) ಅವರಿಗೆ ಕಿರುಕುಳ ನೀಡಲಾಗಿದೆ. ಹೈದರಾಬಾದ್ನಲ್ಲಿ ನಡೆದ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಮಾಲ್ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ನಿಧಿ ಅಗರ್ವಾಲ್ ಅವರು ಪಾಲ್ಗೊಂಡಿದ್ದರು. ಆ ವೇಳೆ ಸಿಕ್ಕಾಪಟ್ಟೆ ಜನ ಸೇರಿದ್ದರು. ನಿಧಿ ಅಗರ್ವಾಲ್ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆಗ ಕೆಲವರು ಅವರ ಜೊತೆ ಅನುಚಿತವಾಗಿ ವರ್ತಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ‘ಸಹನಾ ಸಹನಾ..’ ಹಾಡು ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಪ್ರಭಾಸ್ ಮತ್ತು ನಿಧಿ ಅಗರ್ವಾಲ್ ಅವರು ಕಾಣಿಸಿಕೊಂಡಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಖುಷಿಯಿಂದ ನಿಧಿ ಅಗರ್ವಾಲ್ ಅವರಿಗೆ ಕಹಿ ಅನುಭವ ಆಗಿದೆ. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ.
ನಿಧಿ ಅಗರ್ವಾಲ್ ಅವರನ್ನು ಜನರು ಮುತ್ತಿಗೆ ಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಜನರಿಂದ ಕಿರಿಕಿರಿ ಅನುಭವಿಸಿದ ನಿಧಿ ಅವರನ್ನು ಬಾಡಿಗಾರ್ಡ್ಗಳು ರಕ್ಷಿಸಿದ್ದಾರೆ. ಅವರನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸುವ ವೇಳೆಗೆ ಬಾಡಿಗಾರ್ಡ್ಗಳು ಸುಸ್ತಾಗಿದ್ದಾರೆ. ಕಾರಿನೊಳಗೆ ಬಂದು ಕುಳಿತ ನಿಧಿ ಅಗರ್ವಾಲ್ ಅವರು ವಿಪರೀತ ಕೋಪ ಮಾಡಿಕೊಂಡಿರುವುದು ಕಾಣಿಸಿದೆ.
ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸೂಕ್ತ ಅನುಮತಿ ಪಡೆಯದೆಯೇ ಕಾರ್ಯಕ್ರಮ ನಡೆಸಿದ ಆಯೋಜಕರ ಮೇಲೆ ಕೇಸ್ ದಾಖಲಾಗಿದೆ. ಬುಧವಾರ (ಡಿಸೆಂಬರ್ 17) ಸಂಜೆ 5 ಗಂಟೆಗೆ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಗಂಟೆಗಳ ಕಾಲ ತಡವಾಯಿತು. ಅಷ್ಟು ಹೊತ್ತಿಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಇದನ್ನೂ ಓದಿ: ಸಿಕ್ಕಿದ್ದೇ ಚಾನ್ಸ್ ಅಂತ ಕಂಡ ಕಂಡಲ್ಲಿ ಮುಟ್ಟಿದ್ರು; ಮಾಲ್ನಲ್ಲಿ ನಟಿಗೆ ಕಿರುಕುಳ
ನಿಧಿ ಅಗರ್ವಾಲ್ ಅವರಿಗೆ ಈ ಘಟನೆಯಿಂದ ತುಂಬ ಬೇಸರ ಆಗಿದೆ. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬಗ್ಗೆ ನಿಧಿ ಅಗರ್ವಾಲ್ ಅವರು ಇನ್ನೂ ಹೇಳಿಕೆ ನೀಡಿಲ್ಲ. ಜನರು ನಡೆದುಕೊಂಡ ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




