ನಟಿ ಸಮಂತಾ (Samantha) ಅವರು ವಿಚ್ಛೇದನ ಪಡೆದು ಒಂದು ವರ್ಷದ ಮೇಲಾಗಿದೆ. ಡಿವೋರ್ಸ್ ನಂತರದಲ್ಲಿ ಅವರ ಸಿನಿಮಾ ಆಯ್ಕೆಗಳು ಬದಲಾದವು. ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸಿದರು. ಕೆಲ ತಿಂಗಳಿಂದ ಸಮಂತಾಗೆ ಅನಾರೋಗ್ಯ ಕಾಡಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಸಮಂತಾ ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ತಮಗೆ ಅನಾರೋಗ್ಯ ಉಂಟಾಗಿದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಈ ಕಾಯಿಲೆ ಹೆಸರನ್ನು ಕೂಡ ಹೇಳಿಕೊಂಡಿದ್ದಾರೆ.
ಸಮಂತಾ ಅವರಿಗೆ Myositis ಹೆಸರಿನ ಅಪರೂಪದ ಕಾಯಿಲೆ ಇದೆ. ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತ ಶುರುವಾಗುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. 30-60ರ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಈಗ ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
‘ಯಶೋದಾ ಚಿತ್ರದ ಟ್ರೇಲರ್ಗೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು. ನಿಮ್ಮ ಪ್ರೀತಿ ನನಗೆ ಸವಾಲುಗಳನ್ನು ಎದುರಿಸಲು ಶಕ್ತಿ ನೀಡಿದೆ. ಕೆಲ ತಿಂಗಳ ಹಿಂದೆ ನನ್ನಲ್ಲಿ Myositis ಹೆಸರಿನ ಸಮಸ್ಯೆ ಇರುವುದು ಪತ್ತೆ ಆಯಿತು. ಇದು ಕಡಿಮೆ ಆದ ನಂತರದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುತ್ತಿದೆ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Yashoda Trailer: ‘ಯಶೋದಾ’ ಟ್ರೇಲರ್ ಬಿಡುಗಡೆ; ಸಮಂತಾಗೆ ಸಾಥ್ ನೀಡಿದ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ
‘ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖ ಆಗುತ್ತೇನೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ನನ್ನ ಜೀವನದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನ ಎರಡೂ ಇದ್ದವು. ಇದನ್ನು ನಿರ್ವಹಿಸಲು ಸಾಧ್ಯವೇ ಇಲ್ಲ ಎಂದುಕೊಂಡ ಪರಿಸ್ಥಿತಿಗಳೂ ಕಳೆದು ಹೋಗಿವೆ. ಚೇತರಿಕೆ ಕಾಣಲು ಇನ್ನೂ ಹತ್ತಿರವಾಗುತ್ತಿದ್ದೇನೆ ಅನಿಸುತ್ತದೆ. ಐ ಲವ್ ಯೂ. ಈ ಸಮಯ ಕಳೆಯುತ್ತದೆ’ ಎನ್ನುವ ಮೂಲಕ ಬೇಗ ಚೇತರಿಕೆ ಕಾಣುತ್ತೇನೆ ಎಂಬ ಆತ್ಮವಿಶ್ವಾಸವನ್ನು ಸಮಂತಾ ತೋರಿದ್ದಾರೆ.
Published On - 5:03 pm, Sat, 29 October 22