
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಮತ್ತು ತಮಿಳು ನಟ ದಳಪತಿ ವಿಜಯ್ (Thalapthy Vijay) ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಇಬ್ಬರೂ ಜೊತೆಯಾಗಿ ಆಗಮಿಸಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತ್ರಿಶಾ ಅವರಿಗೆ ವರದಿಗಾರರು ವಿಜಯ್ ಕುರಿತಾದ ಪ್ರಶ್ನೆಗಳಿಂದ ಮುತ್ತಿಗೆ ಹಾಕಿದ್ದಾರೆ. ಆದರೆ ತ್ರಿಶಾ (Trisha Krishnan) ಅವರು ಯಾವುದೇ ಉತ್ತರ ನೀಡದೇ ಮೌನ ತಾಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತ್ರಿಶಾ, ಬಿಳಿ ಟಿ-ಶರ್ಟ್, ಕಪ್ಪು ಪ್ಯಾಂಟ್ ಮತ್ತು ಡೆನಿಮ್ ಜಾಕೆಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅವರು ಒಳಗೆ ನಡೆಯುತ್ತಿದ್ದಂತೆ, ಅಲ್ಲಿದ್ದ ವರದಿಗಾರರು ವಿಜಯ್ ಜೊತೆಗಿನ ಸಂಬಂಧ ಮತ್ತು ಇತ್ತೀಚಿನ ವಿವಾದಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಆದರೆ, ತ್ರಿಶಾ ಯಾವುದೇ ಪ್ರಶ್ನೆಗೂ ಪ್ರತಿಕ್ರಿಯಿಸದೆ, ಅತ್ಯಂತ ಶಾಂತವಾಗಿ ಮತ್ತು ಗಂಭೀರವಾಗಿ ನಡೆದು ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ಮದುವೆಯ ರಿಸೆಪ್ಷನ್‌ನಲ್ಲಿ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಇಬ್ಬರೂ ಕ್ರೀಮ್ ಮತ್ತು ಗೋಲ್ಡ್ ಬಣ್ಣದ ಮ್ಯಾಚಿಂಗ್ ಉಡುಪುಗಳನ್ನು ಧರಿಸಿದ್ದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತ್ತು. ಆ ಮದುವೆಯಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣ ಆಯಿತು.
ಈ ಬೆಳವಣಿಗೆಗಳ ನಡುವೆ, ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ಸಂಚಲನ ಮೂಡಿಸಿದೆ. ಅರ್ಜಿಯಲ್ಲಿ ಅವರು ವಿಜಯ್ ಅವರ ಪರಸ್ತ್ರೀ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ನೇರವಾಗಿ ತ್ರಿಶಾ ಕೃಷ್ಣನ್ ಅವರತ್ತ ಬೆರಳು ಮಾಡುವಂತೆ ಮಾಡಿದೆ.
ಇದನ್ನೂ ಓದಿ: ಡೇಟಿಂಗ್ ವದಂತಿ; ಎಲ್ಲರಿಗೂ ಗೊಂದಲ ಮೂಡಿಸಿದ ತ್ರಿಶಾ ಕೃಷ್ಣನ್
ವಿಚ್ಛೇದನದ ಬಗ್ಗೆ ವಿಜಯ್ ನೇರವಾಗಿ ಮಾತನಾಡಿಲ್ಲವಾದರೂ, ಇತ್ತೀಚೆಗೆ ನಡೆದ ಟಿವಿಕೆ ರ‍್ಯಾಲಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ‘ಇತ್ತೀಚಿನ ದಿನಗಳಲ್ಲಿ ಕೆಲವು ವಿಷಯಗಳು ಓಡಾಡುತ್ತಿವೆ. ಇಂತಹ ಆರೋಪಗಳ ಬಗ್ಗೆ ನೀವು ಹೋರಾಡುತ್ತಿರುವುದನ್ನು ಮತ್ತು ನೋವು ಅನುಭವಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಿಮ್ಮ ಮನಸ್ಸಿಗೆ ನೋವಾದಾಗ ನನಗೂ ನೋವಾಗುತ್ತದೆ. ಆ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅದಕ್ಕೆ ಅಷ್ಟು ಬೆಲೆ ನೀಡುವ ಅಗತ್ಯವಿಲ್ಲ. ನಾನು ಎಲ್ಲವನ್ನೂ ನಿಭಾಯಿಸುತ್ತೇನೆ’ ಎಂದು ಅಭಿಮಾನಿಗಳಿಗೆ ದಳಪತಿ ವಿಜಯ್ ಧೈರ್ಯ ತುಂಬಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.