‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್​

‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್​
ಯಾಮಿ ಗೌತಮ್, ಆದಿತ್ಯ ಧಾರ್​

Yami Gautam: ಕನ್ನಡದ ನಟಿ ಪ್ರಣಿತಾ ಸುಭಾಷ್​ ಅವರು ಗುಟ್ಟಾಗಿ ಮದುವೆ ಆದ ಬೆನ್ನಲ್ಲೇ ‘ಉಲ್ಲಾಸ ಉತ್ಸಾಹ’ ಸಿನಿಮಾ ನಟಿ ಯಾಮಿ ಗೌತಮ್​ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಫೋಟೋಗಳು ವೈರಲ್​ ಆಗಿವೆ.

Madan Kumar

|

Jun 05, 2021 | 8:29 AM

‘ಉಲ್ಲಾಸ ಉತ್ಸಾಹ’ ಸಿನಿಮಾದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ತೆರೆಹಂಚಿಕೊಂಡಿದ್ದ ನಟಿ ಯಾಮಿ ಗೌತಮ್​ ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ಬಾಲಿವುಡ್​ನ ‘ಉರಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಭಾರಿ ಯಶಸ್ಸು ಕಂಡ ನಿರ್ದೇಶಕ ಆದಿತ್ಯ ಧಾರ್​ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ ಮದುವೆ ಆಗುತ್ತಾರೆ ಎಂಬ ಸುಳಿವು ಕೂಡ ಇರಲಿಲ್ಲ. ಕೆಲವೇ ಕೆಲವರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಈ ಹೊಸ ಜೋಡಿ ತಮ್ಮ ಮದುವೆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಬಳಿಕವೇ ವಿಷಯ ಬಹಿರಂಗ ಆಗಿದೆ.

ಸೆಲೆಬ್ರಿಟಿಗಳ ವಿವಾಹ ಎಂದರೆ ಅದ್ದೂರಿಯಾಗಿ ನಡೆಯುವುದು ಸಹಜ. ಆದರೆ ದೇಶಾದ್ಯಂತ ಕೊವಿಡ್​ ಹಾವಳಿ ಹೆಚ್ಚಿರುವುದರಿಂದ ಎಲ್ಲರೂ ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಯಾಮಿ ಗೌತಮ್​ ಮತ್ತು ಆದಿತ್ಯ ಧಾರ್​ ಕೂಡ ಅದೇ ಹಾದಿ ತುಳಿದಿದ್ದಾರೆ. 2019ರಲ್ಲಿ ತೆರೆಕಂಡ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾ ದೊಡ್ಡ ಹಿಟ್ ಆಯಿತು. ಆ ಚಿತ್ರದಿಂದ ಆದಿತ್ಯ ಧಾರ್​ ಅವರ ಜನಪ್ರಿಯತೆ ಹೆಚ್ಚಿತು. ವಿಕ್ಕಿ ಕೌಶಾಲ್​ ನಾಯಕನಾಗಿದ್ದ ಆ ಚಿತ್ರದಲ್ಲಿ ಯಾಮಿ ಗೌತಮ್​ ಅವರು ರಾ ಏಜೆಂಟ್​ ಪಾತ್ರ ಮಾಡಿದ್ದರು. ಆಗಲೇ ಆದಿತ್ಯ ಮತ್ತು ಯಾಮಿ ನಡುವೆ ಗೆಳೆತನ ಬೆಳೆದಿತ್ತು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಫೋಟೋಗಳನ್ನು ಹಂಚಿಕೊಂಡಿರುವ ಯಾಮಿ ಗೌತಮ್​ ಅವರು ಎಲ್ಲರ ಆಶೀರ್ವಾದ ಕೋರಿದ್ದಾರೆ. ‘ಕುಟುಂಬದವರ ಆಶೀರ್ವಾದದೊಂದಿಗೆ ನಾವು ಇಂದು ಮದುವೆ ಆದೆವು. ಕೇವಲ ನಮ್ಮ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಈ ವಿವಾಹ ಸಮಾರಂಭ ನೆರವೇರಿತು. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಅವರು ತಿಳಿಸಿದ್ದಾರೆ.

ನವಜೋಡಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಬಾಲಿವುಡ್​ ಸೆಲೆಬ್ರಿಟಿಗಳಾದ ದಿಯಾ ಮಿರ್ಜಾ, ವಾಣಿ ಕಪೂರ್​, ಜಾಕ್ವಲಿನ್​ ಫರ್ನಾಂಡಿಸ್​, ನೇಹಾ ಧೂಪಿಯಾ ಮುಂತಾದವರು ಕಮೆಂಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಯಾಮಿ ಪತಿ ಆದಿತ್ಯ ಧಾರ್​ ಈಗ ‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದಲ್ಲೂ ವಿಕ್ಕಿ ಕೌಶಾಲ್​ ಹೀರೋ.

ಕನ್ನಡದಲ್ಲಿ ‘ಉಲ್ಲಾಸ ಉತ್ಸಾಹ’ ಸಿನಿಮಾ ಮಾಡಿದ ಬಳಿಕ ಬೇರೆ ಬೇರೆ ಭಾಷೆಗಳಿಂದ ಯಾಮಿ ಗೌತಮ್​ ಅವರಿಗೆ ಆಫರ್​ಗಳು ಬರಲಾರಂಭಿಸಿದವು. ಸದ್ಯ ಅವರು ಹಿಂದಿಯ ‘ಭೂತ್​ ಪೊಲೀಸ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಪ್ರಣಿತಾ ಕೂಡ ಇದೇ ರೀತಿ ಗುಟ್ಟಾಗಿ ಮದುವೆ ಆಗಿದ್ದರು.

ಇದನ್ನೂ ಓದಿ:

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್

Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Follow us on

Related Stories

Most Read Stories

Click on your DTH Provider to Add TV9 Kannada