Ramayan: ಮತ್ತೆ ರಾಮಾಯಣ, ಮಹಾಭಾರತದ ಕಥೆ ಇಟ್ಟುಕೊಂಡ ಸಿನಿಮಾ ಮಾಡುವ ಧೈರ್ಯ ಯಾರಿಗಿದೆ?

|

Updated on: Jun 19, 2023 | 7:00 AM

Mahabharata: ರಾಮಾಯಣದ ಕುರಿತು ಇನ್ನೂ ಹೆಚ್ಚಿನ ಸಿನಿಮಾಗಳು ಬರಬೇಕು ಎಂದು ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ ಹೇಳಿದ್ದಾರೆ. ನಿತೇಶ್ ತಿವಾರಿ, ರಾಜಮೌಳಿ ಮುಂತಾದವರು ಅಂಥ ಪ್ರಯತ್ನ ಮಾಡುತ್ತಿರುವುದು ಗಮನಾರ್ಹ.

Ramayan: ಮತ್ತೆ ರಾಮಾಯಣ, ಮಹಾಭಾರತದ ಕಥೆ ಇಟ್ಟುಕೊಂಡ ಸಿನಿಮಾ ಮಾಡುವ ಧೈರ್ಯ ಯಾರಿಗಿದೆ?
ಪ್ರಭಾಸ್​, ಕೃತಿ ಸನೋನ್​, ನಿತೇಶ್​ ತಿವಾರಿ, ರಾಜಮೌಳಿ, ಕಂಗನಾ ರಣಾವತ್​
Follow us on

ಚಿತ್ರರಂಗದಲ್ಲಿ ಟ್ರೆಂಡ್​ ಫಾಲೋ ಮಾಡುವವರೇ ಹೆಚ್ಚು. ಒಂದು ಸಿನಿಮಾ ಗೆದ್ದರೆ ಅದೇ ರೀತಿ ಇನ್ನಷ್ಟು ಸಿನಿಮಾಗಳು ಬರುತ್ತವೆ. ಅದೇ ರೀತಿ, ಒಂದು ಸಿನಿಮಾ ಹೀನಾಯವಾಗಿ ಸೋತರೆ ಅಂಥ ಪ್ರಯತ್ನಗಳನ್ನು ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಈಗ ‘ಆದಿಪುರುಷ್’ ಸಿನಿಮಾ (Adipurush Movie) ಬಹಳಷ್ಟು ಟೀಕೆಗೆ ಒಳಗಾಗಿದೆ. ಆರಂಭದ ಎರಡು ದಿನಗಳಲ್ಲಿ ಈ ಚಿತ್ರಕ್ಕೆ ಉತ್ತಮ ಕಲೆಕ್ಷನ್​ (Adipurush Collection) ಆಗುತ್ತಿದೆ ಎಂಬುದು ನಿಜ. ಆದರೆ ನೆಗೆಟಿವ್​ ವಿಮರ್ಶೆಯ ಕಾರಣದಿಂದ ಈ ಸಿನಿಮಾಗೆ ನಂತರ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುವುದು ಕಷ್ಟ ಆಗಲಿದೆ. ಹಾಗಾಗಿ ಇನ್ಮುಂದೆ ಪೌರಾಣಿಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವವರ ಎದುರು ದೊಡ್ಡ ಸವಾಲು ಎದುರಾಗಿದೆ. ಜನರನ್ನು ಮೆಚ್ಚಿಸೋದು ನಿಜಕ್ಕೂ ಕಷ್ಟ ಎಂಬುದು ಎಲ್ಲರಿಗೂ ಅರಿವಾಗಿದೆ. ಆದರೂ ಕೂಡ ರಾಮಾಯಣ (Ramayana), ಮಹಾಭಾರತವನ್ನು ಆಧರಿಸಿ ಸಿನಿಮಾ ಮಾಡಲು ಒಂದಷ್ಟು ಮಂದಿ ಪ್ಲ್ಯಾನ್​ ಮಾಡುತ್ತಿದ್ದಾರೆ.

ನಿತೇಶ್​ ತಿವಾರಿ – ರಾಮಾಯಣ:

ಬಾಲಿವುಡ್​ನಲ್ಲಿ ನಿರ್ದೇಶಕ ನಿತೇಶ್​ ತಿವಾರಿ ಅವರು ಯಶಸ್ವಿ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ‘ದಂಗಲ್​’, ‘ಚಿಚೋರೆ’ ರೀತಿಯ ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರ ಮುಂದಿನ ಪ್ರಾಜೆಕ್ಟ್​ ರಾಮಾಯಣದ ಕುರಿತು ಆಗಿರಲಿದೆ ಎಂಬ ಸುದ್ದಿ ಈಗಾಗಲೇ ಕೇಳಿಬಂದಿದೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಕೂಡ ಗುಸುಗುಸು ಕೇಳಿಬರುತ್ತಿದೆ. ರಾಮನಾಗಿ ರಣಬೀರ್​ ಕಪೂರ್​ ನಟಿಸುತ್ತಾರೆ. ಸೀತೆಯಾಗಿ ಆಲಿಯಾ ಭಟ್​ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೂ ಇನ್ನೂ ಅಧಿಕೃತವಾಗಿಲ್ಲ. ‘ಆದಿಪುರುಷ್​’ ಚಿತ್ರಕ್ಕೆ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿರುವುದರಿಂದ ನಿತೇಶ್​ ತಿವಾರಿ ಅವರು ಮತ್ತೊಮ್ಮೆ ರಾಮಾಯಣವನ್ನು ಆಧರಿಸಿ ಸಿನಿಮಾ ಮಾಡುವುದು ನಿಜಕ್ಕೂ ಚಾಲೆಂಜಿಂಗ್​ ಕೆಲಸ ಆಗಲಿದೆ.

ಇದನ್ನೂ ಓದಿ: Adipurush: ‘ಆದಿಪುರುಷ್​’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..

ರಾಜಮೌಳಿ – ಮಹಾಭಾರತ:

ರಾಜಮೌಳಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಬಿಗ್​ ಬಜೆಟ್​ ಸಿನಿಮಾಗಳನ್ನು ಕಟ್ಟಿಕೊಡುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ಕರಗತ ಆಗಿದೆ. ‘ಬಾಹುಬಲಿ’ ರೀತಿಯ ದೊಡ್ಡ ಸಿನಿಮಾ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಮಹಾಭಾರತದ ಕಥೆಯನ್ನು ಪ್ರಧಾನವಾಗಿ ಇಟ್ಟುಕೊಂಡು ರಾಜಮೌಳಿ ಅವರು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅದು ಬರೋಬ್ಬರಿ 10 ಪಾರ್ಟ್​ಗಳಲ್ಲಿ ಬರಲಿದೆ ಎಂಬುದು ವಿಶೇಷ. ಆ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಇಂಥ ಕಥೆಯನ್ನು ರಾಜಮೌಳಿ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಸಿನಿಪ್ರಿಯರಿಗೆ ಇದೆ. ಆದರೂ ಕೂಡ ಅದು ಸವಾಲಿನ ಕೆಲಸ ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: Adipurush: ‘ಆದಿಪುರುಷ್​’ ಹೀರೋ ಪ್ರಭಾಸ್​ಗೆ 150 ಕೋಟಿ ರೂ. ಸಂಬಳ; ಇನ್ನುಳಿದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?

 ಕಂಗನಾ ರಣಾವತ್​ – ಸೀತೆಯ ಕಥೆ

ನಟಿ ಕಂಗನಾ ರಣಾವತ್​ ಅವರು ‘ಸೀತಾ: ದಿ ಇನ್​ಕಾರ್ನೇಷನ್​’ಸಿನಿಮಾ ಅನೌನ್ಸ್​ ಮಾಡಿ ಒಂದು ವರ್ಷ ಕಳೆದಿದೆ. ಈ ಚಿತ್ರ ಕೂಡ ರಾಮಾಯಣವನ್ನು ಆಧರಿಸಿ ತಯಾರಾಗಲಿದೆ. ಸಂಪೂರ್ಣ ಸೀತೆಯ ಕುರಿತಾಗಿ ಈ ಸಿನಿಮಾ ಮೂಡಿಬರಲಿದೆ. ಅಲೌಕಿಕ್​ ದೇಸಾಯಿ ಅವರು ಇದಕ್ಕೆ ನಿರ್ದೇಶನ ಮಾಡಲಿದ್ದಾರೆ. ತುಂಬ ಎಚ್ಚರಿಕೆಯಿಂದ ಸಿನಿಮಾ ಮಾಡಬೇಕಾದ ಜವಾಬ್ದಾರಿ ಈ ಚಿತ್ರತಂಡದ ಮೇಲಿದೆ.

ರಾಮಾಯಣದ ಕುರಿತು ಇನ್ನೂ ಹೆಚ್ಚಿನ ಸಿನಿಮಾಗಳು ಬರಬೇಕು ಎಂದು ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ ಅವರು ಹೇಳಿದ್ದಾರೆ. ನಿತೇಶ್ ತಿವಾರಿ, ರಾಜಮೌಳಿ ಅವರಂತಹ ಘಟಾನುಘಟಿಗಳಿಂದ ಅಂಥ ಪ್ರಯತ್ನ ಆಗುತ್ತಿರುವುದು ಗಮನಾರ್ಹ. ಮಹಾಭಾರತ, ರಾಮಾಯಣ ಮುಂತಾದ ಕಥೆಗಳ ಬಗ್ಗೆ ಎಲ್ಲರಿಗೂ ಗೊತ್ತು. ಗೊತ್ತಿರುವ ಕಥೆಯನ್ನೇ ಮತ್ತೆ ಆಸಕ್ತಿಕರವಾಗಿ ಸಿನಿಮಾದಲ್ಲಿ ತೋರಿಸೋದು ಎಂದರೆ ಸುಲಭವದ ಮಾತಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.