Adipurush: ಮೇ 29ರಂದು ರಿಲೀಸ್ ಆಗಲಿದೆ ‘ಆದಿಪುರುಷ್’ ಚಿತ್ರದ 2ನೇ ಹಾಡು ‘ರಾಮ್ ಸಿಯಾ ರಾಮ್’
Adipurush Movie Songs: ಟೀಸರ್, ಟ್ರೇಲರ್ ಮಾತ್ರವಲ್ಲದೇ ಹಾಡುಗಳ ಮೂಲಕವೂ ‘ಆದಿಪುರುಷ್’ ಸಿನಿಮಾ ಗಮನ ಸೆಳೆಯುತ್ತಿದೆ. ಈ ಚಿತ್ರದ ಎರಡನೇ ಹಾಡು ‘ರಾಮ್ ಸಿಯಾ ರಾಮ್’ ಬಿಡುಗಡೆಗೆ ಈಗ ದಿನಾಂಕ ನಿಗದಿ ಆಗಿದೆ. ಮೇ 29ರಂದು ಈ ಗೀತೆ ರಿಲೀಸ್ ಆಗಲಿದೆ.
ಟೀಸರ್, ಟ್ರೇಲರ್ ಮಾತ್ರವಲ್ಲದೇ ಹಾಡುಗಳ ಮೂಲಕವೂ ‘ಆದಿಪುರುಷ್’ ಸಿನಿಮಾ (Adipurush Movie) ಗಮನ ಸೆಳೆಯುತ್ತಿದೆ. ಈ ಚಿತ್ರದ ಎರಡನೇ ಹಾಡು ‘ರಾಮ್ ಸಿಯಾ ರಾಮ್’ (Ram Siya Ram) ಬಿಡುಗಡೆಗೆ ಈಗ ದಿನಾಂಕ ನಿಗದಿ ಆಗಿದೆ. ಮೇ 29ರಂದು ಈ ಗೀತೆ ರಿಲೀಸ್ ಆಗಲಿದೆ. ಈ ಚಿತ್ರದ ಮೊದಲ ಹಾಡು ‘ಜೈ ಶ್ರೀರಾಮ್..’ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿತು. ಈಗ ಎರಡನೇ ಹಾಡಿಗಾಗಿ ಫ್ಯಾನ್ಸ್ ಕಾದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಅವರು ‘ಆದಿಪುರುಷ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ರಾಮಾಯಣ ಆಧರಿಸಿದ ಈ ಸಿನಿಮಾದಲ್ಲಿ ಪ್ರಭಾಸ್ (Prabhas) ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರಕ್ಕೆ ಕೃತಿ ಸನೋನ್ ಬಣ್ಣ ಹಚ್ಚಿದ್ದಾರೆ. ಜೂನ್ 16ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.
ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಲೇ ಇತ್ತು. ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಮೇ 9ರಂದು ‘ಆದಿಪುರುಷ್’ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಯಿತು. ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಟ್ರೇಲರ್ನಲ್ಲಿ ಅದ್ದೂರಿತನ ಕಾಣಿಸಿದೆ. ದೊಡ್ಡ ಪರದೆಯಲ್ಲಿ ‘ಆದಿಪುರುಷ್’ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿದೆ.
ಇದನ್ನೂ ಓದಿ: Kriti Sanon: ಮೊದಲ ಬಾರಿ ಫೋಟೋಶೂಟ್ ಮಾಡಿಸಿದಾಗ ಅಳುತ್ತಾ ಮನೆಗೆ ಬಂದಿದ್ದ ಕೃತಿ ಸನೋನ್; ಕಾರಣ ಏನು?
‘ಟಿ ಸೀರೀಸ್’ನ ಭೂಷಣ್ ಕುಮಾರ್ ಅವರು ‘ಆದಿಪುರುಷ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲ ದಿನ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ‘ಬಾಹುಬಲಿ 2’ ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ‘ಸಲಾರ್’, ‘ಪ್ರಾಜೆಕ್ಟ್ ಕೆ’ ಸಿನಿಮಾದ ಕೆಲಸದಲ್ಲೂ ಪ್ರಭಾಸ್ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: Kriti Sanon: 24 ಕ್ಯಾರೆಟ್ ಗೋಲ್ಡ್ ಇರುವ ಸೀರೆ ಧರಿಸಿ ಬಂದ ನಟಿ ಕೃತಿ ಸನೋನ್; ಸೀತೆ ಪಾತ್ರದಲ್ಲಿ ಮಿಂಚಿಂಗ್
ಈಗಾಗಲೇ ರಾಮಾಯಣ ಆಧರಿಸಿ ಹಲವು ಧಾರಾವಾಹಿ ಹಾಗೂ ಸಿನಿಮಾಗಳು ಬಂದು ಹೋಗಿವೆ. ಆದಾಗ್ಯೂ ಓಂ ರಾವತ್ ಇದೇ ಕಥೆ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.