Updated on: May 25, 2023 | 12:15 PM
ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳಿಗೆ ಭಾಜನವಾಗಿರುವ ‘ಪಿಂಕಿ ಎಲ್ಲಿ?’ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. ಕೃಷ್ಣೇಗೌಡ ಅವರು ನಿರ್ಮಾಣ ಮಾಡಿ, ಪೃಥ್ವಿ ಕೋಣನೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಜೂನ್ 2ರಂದು ತೆರೆಗೆ ಬರಲಿದೆ.
ಸತ್ಯ ಘಟನೆಯನ್ನು ಆಧರಿಸಿ ಸಿದ್ಧವಾದ ಈ ಸಿನಿಮಾ ಭಿನ್ನ ಶೈಲಿಯಲ್ಲಿದೆ. ಕಣ್ಣಂಚನ್ನು ತೇವಗೊಳಿಸುವ, ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಮನಸು ಮುರಿದ ದಂಪತಿ ಮತ್ತು ಪುಟ್ಟ ಮಗುವಿನ ಸುತ್ತ ಈ ಚಿತ್ರದ ಕತೆ ಸಾಗುತ್ತದೆ.
ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾಗಳು ಕಮರ್ಶಿಯಲ್ ಸಿನಿಮಾಗಳಿಗೆ ಪೈಪೋಟಿ ಕೊಟ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗೋದು ವಿರಳ. ಆದರೆ ನಿರ್ಮಾಪಕರಾದ ಕೃಷ್ಣೇಗೌಡ ಅವರು ಅದನ್ನು ಸಾಧ್ಯವಾಗಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಸಿನಿಮಾದ ಪ್ರಧಾನ ಪಾತ್ರವನ್ನು ಪ್ರತಿಭಾನ್ವಿತ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ನಿಭಾಯಿಸಿದ್ದಾರೆ. ಸವಾಲಿನಿಂದ ಕೂಡಿದ ಈ ಪಾತ್ರವನ್ನು ಅವರು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ.
ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಮುಂತಾದವರ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ವ್ಯವಹಾರಿಕವಾಗಿಯೂ ಈ ಚಿತ್ರ ಗೆಲುವು ಕಾಣುತ್ತಿದೆ. ಈಗಾಗಲೇ ರಿಮೇಕ್ ಹಕ್ಕು ಮತ್ತು ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಬಂದಿದೆ.