ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆದರಿಕೆ ಬಂದ ನಂತರ ಶಾರುಖ್ ಖಾನ್ ತಂಡ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಶಾರುಖ್‌ಗೆ ಬೆದರಿಕೆ ಬಂದ ಫೋನ್ ಫೈಜಾನ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಆತನ ಕೊನೆಯ ಸ್ಥಳ ರಾಯ್‌ಪುರದಲ್ಲಿ ಪತ್ತೆಯಾಗಿದೆ.
ಮಹಾರಾಷ್ಟ್ರ ಪೊಲೀಸ್ ತಂಡ ರಾಯಪುರ ತಲುಪಿದೆ. ಮಹಾರಾಷ್ಟ್ರ ಪೊಲೀಸರು ಫೈಜಾನ್ ಖಾನ್ ಎಂಬ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಗೆ ಮೊಬೈಲ್ ನಿಂದ ಬೆದರಿಕೆ ಕರೆ ಬಂದಿದೆ. 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವು ದಿನಗಳಿಂದ ಗ್ಯಾಂಗ್ಸ್ಟರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಲ್ಮಾನ್ ಹೆಸರಿನಲ್ಲಿ ಒಂದರ ಹಿಂದೆ ಒಂದರಂತೆ ಬೆದರಿಕೆಗಳು ಬರುತ್ತಿವೆ. ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪೊಲೀಸರು ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 5, ಮಂಗಳವಾರ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶಾರುಖ್ ಖಾನ್‌ಗೆ ಬೆದರಿಕೆಯ ದೂರು ದಾಖಲಾಗಿದೆ.
ಮತ್ತಷ್ಟು ಓದಿ: ಕೊಲೆ ಬೆದರಿಕೆಯ ಮಧ್ಯೆಯೂ ರಶ್ಮಿಕಾ ಜೊತೆ ಶೂಟ್ನಲ್ಲಿ ಭಾಗಿ ಆದ ಸಲ್ಮಾನ್ ಖಾನ್
ನವೆಂಬರ್ 5 ರ ರಾತ್ರಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಎದುರಿಗಿದ್ದವರ ಹೆಸರು ಕೇಳಿದಾಗ ಕಾನ್ಸ್ಟೇಬಲ್, ನಾನು ಯಾರು ಮತ್ತು ನಾನು ಎಲ್ಲಿಂದ ಮಾತನಾಡುತ್ತಿದ್ದೇನೆ ಎಂದು ಹೇಳುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ, ನೀವು ಹೆಸರನ್ನು ಬರೆಯಲು ಬಯಸಿದರೆ ಹಿಂದೂಸ್ತಾನಿ ಎಂದು ಬರೆಯಿರಿ ಎಂದಿದ್ದ.
ಇದಾದ ನಂತರ ಕಾನ್‌ಸ್ಟೆಬಲ್ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಇದೀಗ ಶಾರುಖ್ ತಂಡ ನೀಡಿದ ದೂರಿನ ಬಳಿಕ ತನಿಖೆ ಚುರುಕುಗೊಂಡಿದೆ. ಮುಂದಿನ ದಿನಗಳಲ್ಲಿ ಶಾರುಖ್ ಖಾನ್ ಅವರನ್ನೂ ಈ ವಿಚಾರದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.
ಶಾರುಖ್ ಖಾನ್ ಅವರಿಗೆ ಬೆದರಿಕೆ ಹಾಕಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿರಬಹುದು ಎನ್ನಲಾಗಿದೆ.
ಇತ್ತೀಚೆಗಷ್ಟೇ ಕಿಂಗ್ ಖಾನ್ ಹುಟ್ಟುಹಬ್ಬದ ದಿನವಾದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅವರ ನಿವಾಸ ‘ಮನ್ನತ್’ ಎದುರು ಅಭಿಮಾನಿಗಳ ದಂಡು ಸೇರಲು ಬಿಡಲಿಲ್ಲ. ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಂದ್ರಾ ಪೊಲೀಸರು ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Thu, 7 November 24