ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಈಗ ಸಿನಿಮಾಗಳಿಂದ ಕೊಂಚ ದೂರ ಇದ್ದಾರೆ. 2018ರಲ್ಲಿ ಬಂದ ‘ಫನ್ನೆ ಖಾನ್’ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿಯೂ ಅವರು ಅವಸರ ತೋರುತ್ತಿಲ್ಲ. ಸದ್ಯಕ್ಕೆ ಮನೆ, ಮಕ್ಕಳು, ಸಂಸಾರ ಅಂತ ಅವರು ಬ್ಯುಸಿ ಆಗಿದ್ದಾರೆ. ಅವರು ಚಿತ್ರರಂಗದಿಂದ ದೂರ ಇದ್ದರೂ ಕೂಡ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವೈಯಕ್ತಿಕ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಈಗ ಒಂದು ವಿಡಿಯೋ ವೈರಲ್ ಆಗಿದೆ.
ಐಶ್ವರ್ಯಾ ರೈ ಅವರನ್ನು ಮದುವೆ ಆಗಬೇಕು ಎಂದು ಆಸೆ ಪಟ್ಟವರು ಒಬ್ಬಿಬ್ಬರಲ್ಲ. ಐಶ್ ಜೊತೆ ನಟರಾದ ಸಲ್ಮಾನ್ ಖಾನ್, ವಿವೇಕ್ ಒಬೆರಾಯ್, ಮಾಡೆಲ್ ರಾಜೀವ್ ಮೂಲ್ಚಂದಾನಿ ಡೇಟಿಂಗ್ ಮಾಡಿದ್ದರು. ಅವರನ್ನು ನೋಡುತ್ತಲೇ ಇರಬೇಕು ಎನಿಸುತ್ತದೆ ಎಂದು ನಟ ಅಕ್ಷಯ್ ಖನ್ನಾ ಹೇಳಿದ್ದರು. ಅಭಿಮಾನಿಗಳಂತೂ ಐಶ್ವರ್ಯಾ ರೈ ಬಗ್ಗೆ ಹಗಲುಗನಸು ಕಂಡಿದ್ದೇ ಹೆಚ್ಚು. ಆ ಪೈಕಿ ಕೆಲವರು ಧೈರ್ಯ ಪ್ರದರ್ಶಿಸಿ, ಮದುವೆ ಪ್ರಪೋಸ್ ಕೂಡ ಮಾಡಿದ್ದರು.
ಅಂತಾರಾಷ್ಟ್ರೀಯ ಸೌಂದರ್ಯ ವರ್ಧಕಗಳ ಕಂಪನಿಗಳಿಗೆ ರಾಯಭಾರಿ ಆಗಿರುವ ಐಶ್ವರ್ಯಾ ರೈ ಅವರು ಹಲವು ಬಾರಿ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ಗೆ ಹೋಗಿದ್ದಾರೆ. ಒಮ್ಮೆ ಅವರ ಜೊತೆ ಪತಿ ಅಭಿಷೇಕ್ ಬಚ್ಚನ್ ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತ, ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ನೀಡುತ್ತಿದ್ದರು. ಆಗ ಅಭಿಮಾನಿಗಳು ಹುಚ್ಚೆದ್ದು ಕೂಗುತ್ತಿದ್ದರು. ಆ ಪೈಕಿ ಒಬ್ಬ ಅಭಿಮಾನಿಯಂತೂ ‘ನನ್ನನ್ನು ಮದುವೆ ಆಗು’ ಎಂಬ ಫಲಕ ಹಿಡಿದುಕೊಂಡು ಕೂಗುತ್ತಿದ್ದ.
ಸಾರ್ವಜನಿಕವಾಗಿ ಪತಿ ಅಭಿಷೇಕ್ ಬಚ್ಚನ್ ಎದುರಿನಲ್ಲೇ ಐಶ್ಗೆ ಅಭಿಮಾನಿ ಪ್ರಪೋಸ್ ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿಗೆ ಅಭಿಷೇಕ್ ನೀಡಿದ ಉತ್ತರ ಕೂಡ ಅಷ್ಟೇ ಮಜವಾಗಿತ್ತು. ಆತನ ಮ್ಯಾರೇಜ್ ಪ್ರಪೋಸಲ್ ನೋಡಿದ ಐಶ್ ನಕ್ಕು ಸುಮ್ಮನಾದರು. ಆದರೆ ಅಭಿಷೇಕ್, ‘ಆಕೆ ನನ್ನನ್ನು ಮದುವೆ ಆದಿದ್ದಾಳೆ ಮಾರಾಯಾ, ಸಾರಿ’ ಎಂದು ನಗುತ್ತಲೇ ಹೇಳಿಬಿಟ್ಟರು.
ಸದ್ಯ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ನಿಂತಿದೆ. ಆ ಸಿನಿಮಾ ಮೇಲೆ ಪ್ರೇಕ್ಷಕರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:
ಪುರುಷ ಮಾಡೆಲ್ ವಿಚಾರಕ್ಕೆ ಕಿತ್ತಾಡಿಕೊಂಡಿದ್ದ ಐಶ್ವರ್ಯಾ ರೈ-ಮನಿಷಾ ಕೊಯಿರಾಲಾ; ಬಚ್ಚನ್ ಸೊಸೆಯ ಕಣ್ಣೀರ ಕಥೆ
ಐಶ್ವರ್ಯಾ ರೈ-ಅಭಿಷೇಕ್ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ
Published On - 11:48 am, Thu, 20 May 21