ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ಅಜಿತ್; ಅಪರೂಪದ ನಡೆ

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ತಮ್ಮ ಅಭಿಮಾನಿ ಮಕ್ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪ್ರಚಾರಗಳಿಂದ ದೂರವಿರುವ ಅಜಿತ್ ಅವರ ಈ ಅಪರೂಪದ ಸರಳ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಸಿಂಗ್ ವೃತ್ತಿಯಲ್ಲಿದ್ದರೂ, ಅವರು ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ, ಅವರ ದಿನಚರಿ ಬಗ್ಗೆ ವಿಚಾರಿಸಿದರು.

ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ಅಜಿತ್; ಅಪರೂಪದ ನಡೆ
ಅಜಿತ್

Updated on: Jun 10, 2026 | 8:33 AM

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajit Kumar) ಅವರ ಶೈಲಿಯೇ ವಿಭಿನ್ನ. ಸಾಮಾನ್ಯವಾಗಿ ಅವರು ತಮ್ಮ ಸಿನಿಮಾಗಳ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ, ಆಡಿಯೋ ಲಾಂಚ್‌ಗೆ ಬರೋದಿಲ್ಲ, ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಂಟರ್‌ಟೇನ್ ಮಾಡಲು ಹೋಗುವುದಿಲ್ಲ. ಸ್ಟಾರ್ ಇಮೇಜ್‌ನಿಂದ ಯಾವಾಗಲೂ ದೂರ ಉಳಿಯುವ ಅಜಿತ್, ಇತ್ತೀಚೆಗೆ ತಮ್ಮ ಪುಟ್ಟ ಅಭಿಮಾನಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಸದಾ ಸೈಲೆಂಟ್ ಆಗಿರುವ ನಟನ ಈ ಅಪರೂಪದ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಹೊರತುಪಡಿಸಿ ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ಅಜಿತ್ ಕುಮಾರ್, ಇತ್ತೀಚೆಗೆ ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಸ್ನೇಹಿತನ ಮಕ್ಕಳು ಅಜಿತ್ ಅವರ ದೊಡ್ಡ ಅಭಿಮಾನಿಗಳು. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ, ರೇಸಿಂಗ್ ಡ್ರೆಸ್ ಧರಿಸಿರುವ ಅಜಿತ್ ಹೆಲ್ಮೆಟ್ ಹಿಡಿದುಕೊಂಡು ವಿಡಿಯೋ ಕಾಲ್ ಬಂದಾಗ ಅವರ ಖುಷಿಗೆ ಪಾರವೇ ಇರಲಿಲ್ಲ.
ಅಜಿತ್ ಕುಮಾರ್ ಅವರು ತಮ್ಮ ಗೆಳೆಯನ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಮಾತನಾಡುವಾಗ ಅಜಿತ್ ಅವರು ಆ ಇಬ್ಬರು ಮಕ್ಕಳ ದಿನಚರಿ ಮತ್ತು ಓದಿನ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ‘ಮುಂದಿನ ಬಾರಿ ನಾನು ಖಂಡಿತಾ ನಿಮ್ಮನ್ನು ಖುದ್ದಾಗಿ ಬಂದು ಭೇಟಿ ಮಾಡುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಜೀವನ ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ. ವಿಡಿಯೋ ಕಾಲ್ ಮುಗಿಯುತ್ತಿದ್ದಂತೆ ಆ ಅಣ್ಣ-ತಂಗಿ ಇಬ್ಬರೂ ಸೂಪರ್‌ಸ್ಟಾರ್ ಜೊತೆ ಮಾತನಾಡಿದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕಕ್ಕೆ ಸಿಗದ ನಟನ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ವಿಡಿಯೋ ಕೆಳಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ‘ನೀವೇ ಅತ್ಯಂತ ಅದೃಷ್ಟವಂತ ಹುಡುಗಿ’ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ನಿಮ್ಮ ತಂದೆ ಸಾಕ್ಷಾತ್ ಆ ದೇವರ (ಅಜಿತ್) ಜೊತೆಯೇ ಸ್ನೇಹ ಬೆಳೆಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇದು ಗಾಡ್ ಲೆವೆಲ್ ಫ್ಯಾಮಿಲಿ ಫ್ರೆಂಡ್‌ಶಿಪ್’ ಎಂದು ಅಭಿಮಾನಿಗಳು ಅಜಿತ್ ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್​​ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ

90ರ ದಶಕದಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಜಿತ್, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರೂ ಅದ್ದೂರಿ ಪ್ರಚಾರದಿಂದ ದೂರವೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರೇಸಿಂಗ್ ಸೀಸನ್‌ನ ಬ್ರೇಕ್ ಸಮಯದಲ್ಲಿ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ಅವರ ನಟನೆಯ ‘ವಿದಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಕಂಡಿದ್ದವು. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅಜಿತ್, ದುಃಖದ ನಡುವೆಯೂ ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us