
ನಂದಮೂರಿ ಬಾಲಕೃಷ್ಣ (Balakrishna) ತೆಲುಗು ಚಿತ್ರರಂಗದ ಸ್ಟಾರ್ ಹೀರೋ. ಅವರ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅವರ ಸಿನಿಮಾಗಳನ್ನು ಟ್ರೋಲ್ ಮಾಡುತ್ತಲೇ ಜನ ನೋಡುತ್ತಾರೆ ಖುಷಿ ಪಡುತ್ತಾರೆ. ಬಾಲಯ್ಯ ಈ ವರೆಗೆ ತೆಲುಗು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. ತೆಲುಗು ಬಿಟ್ಟು ಇನ್ಯಾವುದೇ ಭಾಷೆಗಳಲ್ಲಿ ಬಾಲಯ್ಯ ನಟಿಸಿಲ್ಲ. ತಮಿಳು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೂ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಅವರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿಯೂ ನಟಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬಾಲಯ್ಯ, ತಮ್ಮ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ಗೆ ಕೊಂಡೊಯ್ಯುತ್ತಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಜೊತೆಗೆ ಟ್ರಾವೆಲ್ ಮಾಡಿ ಪ್ರಚಾರವನ್ನೂ ಮಾಡಲಿದ್ದಾರೆ.
ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಸಾಧುವಿನ ಪಾತ್ರದಲ್ಲಿ ಬಾಲಯ್ಯ ನಟಿಸಿದ್ದರು. ಹೆಸರಿಗೆ ಸಾಧುವಾದರೂ ಭಾರಿ ಕೋಪ, ತಾಪಗಳುಳ್ಳ ಸಾಧುವಿನ ಪಾತ್ರವದು. ಆ ಸಿನಿಮಾ ಭಾರಿ ಹಿಟ್ ಆಗಿತ್ತು. ಇದೀಗ ಸಿನಿಮಾದ ಎರಡನೇ ಭಾಗವನ್ನು ನಿರ್ಮಾಣ ಮಾಡಲಾಗಿದ್ದು, ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಕೇವಲ ತೆಲುಗಿನಲ್ಲಿ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಇದನ್ನೂ ಓದಿ:ಬಾಲಕೃಷ್ಣ ಆಕ್ರೋಶಕ್ಕೆ ಚಿರಂಜೀವಿ ಶಾಂತ ಪ್ರತಿಕ್ರಿಯೆ
ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಬಾಲಕೃಷ್ಣ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರಲಿದೆ. ಬಾಲಯ್ಯ ಸಹ ಮುಂಬೈ, ಚೆನ್ನೈ, ಬೆಂಗಳೂರು ಇನ್ನೂ ಕೆಲವೆಡೆ ಹೋಗಿ ಸಿನಿಮಾ ಪರವಾಗಿ ಪ್ರಚಾರವನ್ನು ಸಹ ಮಾಡಲಿದ್ದಾರೆ. ಈ ಹಿಂದೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಬಾಲಯ್ಯ ತಮಾಷೆ ಮಾಡಿದ್ದರು. ಅಲ್ಲದೆ ತಮಗೆ ಅದು ಸೆಟ್ ಆಗಲ್ಲ ಎಂದೆಲ್ಲ ಹೇಳಿದ್ದರು. ಆದರೆ ಈಗ ಸ್ವತಃ ಬಾಲಯ್ಯ ಅವರೇ ಪ್ಯಾನ್ ಇಂಡಿಯಾ ಸಿನಿಮಾಗಳ ಸೆಳೆತಕ್ಕೆ ಸಿಲುಕಿದ್ದಾರೆ.
ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾವನ್ನು ಬೊಯಪಾಟಿ ಸೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಂಯುಕ್ತ ಹಾಗೂ ಹರ್ಷಾಲಿ ಮಲ್ಹೋತ್ರಾ ನಟಿಸಿದ್ದಾರೆ. ಸಿನಿಮಾಕ್ಕೆ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾ ಡಿಸೆಂಬರ್ 05ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಭಾರಿ ಯಶಸ್ವಿ ಆಗುವ ನಿರೀಕ್ಷೆಯಲ್ಲಿ ಬಾಲಯ್ಯ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ