ಬಾಲಕೃಷ್ಣ ಆಕ್ರೋಶಕ್ಕೆ ಚಿರಂಜೀವಿ ಶಾಂತ ಪ್ರತಿಕ್ರಿಯೆ
Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ನಟ ಮತ್ತು ಶಾಸಕ ಬಾಲಕೃಷ್ಣ ಆಂಧ್ರ ವಿಧಾನಸಭೆಯಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ ಮಾತುಗಳಿಗೆ ಘನತೆ ಮತ್ತು ವಿನಯದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಎರಡೂ ಕುಟುಂಬಗಳ ನಡುವೆ ತೆಳುವಾಗಿದ್ದ ವೈಷಮ್ಯ ಈಗ ಮತ್ತೆ ಭುಗಿಲೆದ್ದಿದೆ.

ಮೆಗಾಸ್ಟಾರ್ ಚಿರಂಜೀವಿ (Chiranjeevi) ಹಾಗೂ ನಂದಮೂರಿ ಕುಟುಂಬದ ನಡುವೆ ಹಲವು ದಶಕಗಳಿಂದಲೂ ವೈಮನಸ್ಯ ಇದೆ. ಬಾಲಕೃಷ್ಣ ಈ ಹಿಂದೆ ಕೆಲವು ಬಾರಿ ಚಿರಂಜೀವಿ ಬಗ್ಗೆ ಪರೋಕ್ಷವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಅಂತೂ ಇಬ್ಬರ ನಡುವೆ ಹಲವು ಬಾರಿ ನೇರಾ-ನೇರಾ ಸ್ಪರ್ಧೆಗಳು ನಡೆದಿವೆ. ಆದರೆ ಇತ್ತೀಚೆಗೆ ಈ ಎರಡೂ ಕುಟುಂಬಗಳ ನಡುವೆ ವೈಮನಸ್ಯ ಕಡಿಮೆ ಆಗಿತ್ತು. ಸ್ವತಃ ಚಿರಂಜೀವಿ, ಬಾಲಯ್ಯನ ಕಾರ್ಯಕ್ರಮಕ್ಕೆ ಹೋಗಿ ಒಳ್ಳೆಯ ಮಾತುಗಳನ್ನಾಡಿ ಬಂದಿದ್ದರು. ಆದರೆ ಈಗ ಹಠಾತ್ತನೆ ಬಾಲಕೃಷ್ಣ ಅವರ ಹೇಳಿಕೆಯಿಂದ ಮತ್ತೆ ಚಿರಂಜೀವಿ ಮತ್ತು ಬಾಲಕೃಷ್ಣ ನಡುವೆ ವೈಮನಸ್ಯ ಮೂಡಿದೆ.
ಶಾಸಕರೂ ಆಗಿರುವ ಬಾಲಕೃಷ್ಣ, ವಿಧಾನಸಭೆಯಲ್ಲಿ ಮಾತನಾಡುತ್ತಾ, ‘ಚಿರಂಜೀವಿ ಗಟ್ಟಿಯಾಗಿ ಮಾತನಾಡಿದ್ದಕ್ಕೆ ವೈಎಸ್ ಜಗನ್, ಚಿತ್ರರಂಗದ ಪ್ರಮುಖರೊಟ್ಟಿಗೆ ಸಭೆಗೆ ಬಂದಿದ್ದರು ಎಂಬುದು ಸುಳ್ಳು. ಗಟ್ಟಿಯಾಗಿ ಯಾರೂ ಮಾತನಾಡಿಲ್ಲ’ ಎಂದು ಹೇಳಿದ್ದರು. ಅಲ್ಲಿಗೆ ಪರೋಕ್ಷವಾಗಿ, ಚಿರಂಜೀವಿ ಜಗನ್ ಎದುರು ಕೈಚಾಚಿದರು, ಅವರು ಧೈರ್ಯದಿಂದ ಮಾತನಾಡಲಿಲ್ಲ ಎಂದು ಹೇಳಿದ್ದಾರೆ.
ಬಾಲಕೃಷ್ಣ ಹೇಳಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ನಟ ಚಿರಂಜೀವಿ, ಬಾಲಯ್ಯ ಹೇಳಿಕೆಗೆ ಘನತೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ‘ಕೆಲವು ನಿರ್ಮಾಪಕರು, ವಿತರಕರು ನನ್ನ ಬಳಿ ಮನವಿ ಮಾಡಿದ್ದರಿಂದ ನಾನು ಆಗಿನ ಸಿನಿಮಾಟೊಗ್ರಫಿ ಮಂತ್ರಿ ಪೆರಿನಿ ನಾನಿ ಸಹಾಯದಿಂದ ಸಿಎಂ ಅವರನ್ನು ಸಂಪರ್ಕಿಸಿದೆ. ಅವರೊಟ್ಟಿಗೆ ಉಪಹಾರಕ್ಕೆ ಭೇಟಿಯಾಗಿ ಚಿತ್ರರಂಗದ ಕಷ್ಟಗಳನ್ನು ಅವರಿಗೆ ವಿವರಿಸಿದೆ. ಬಳಿಕ ಚಿತ್ರರಂಗದ ಕೆಲ ಗಣ್ಯರೊಟ್ಟಿಗೆ ಭೇಟಿ ಆಗುವುದಾಗಿ ಹೇಳಿದೆ’ ಎಂದಿದ್ದಾರೆ.
ಇದನ್ನೂ ಓದಿ:ಮತ್ತೆ ಭುಗಿಲೆದ್ದಿತು ಚಿರಂಜೀವಿ-ಬಾಲಕೃಷ್ಣ ನಡುವೆ ವೈಮನಸ್ಯ
ಕೆಲ ದಿನಗಳ ಬಳಿಕ ‘ಕೋವಿಡ್ ಕಾರಣದಿಂದಾಗಿ ಕೆಲವೇ ಜನರನ್ನು ಭೇಟಿಗೆ ಕರೆತರುವಂತೆ ಸಿಎಂ ಸಹಾಯಕರು ಹೇಳಿದರು. ಆ ಸಮಯದಲ್ಲಿ ನಾನು ಖುದ್ದಾಗಿ ಬಾಲಕೃಷ್ಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಆಗಲಿಲ್ಲ. ನಿರ್ಮಾಪಕ ಜೆಮಿನಿ ಗಣೇಶ್ ಅವರ ಮೂಲಕ ಸಂಪರ್ಕಿಸಲು ಯತ್ನಿಸಿದೆ ಆಗಲಿಲ್ಲ. ಬಳಿಕ ಆರ್ ನಾರಾಯಣ ಮೂರ್ತಿ ಅವರ ನೆರವಿನಿಂದ ವಿಶೇಷ ವಿಮಾನ ಮಾಡಿಕೊಂಡು ಕೆಲವು ನಟರು, ನಿರ್ದೇಶಕರನ್ನು ಕರೆದುಕೊಂಡು ಸಭೆಗೆ ಹೋದೆ’ ಎಂದಿದ್ದಾರೆ.
‘ಸಭೆಯ ಸಮಯದಲ್ಲಿ ಆಗಿನ ಸಿಎಂ ಜಗನ್ ಅವರು ನಮ್ಮನ್ನು ಗೌರವಪೂರ್ಕವಾಗಿಯೇ ನಡೆಸಿಕೊಂಡರು. ಸಭೆಯಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿ, ಟಿಕೆಟ್ ದರ ಹೆಚ್ಚಿಸುವಂತೆ ಮನವಿ ಮಾಡಿದೆ. ಅದರಿಂದಾಗಿಯೇ ಸಿನಿಮಾ ಟಿಕೆಟ್ ದರಗಳನ್ನು ಹೆಚ್ಚಿಸಲಾಯ್ತು. ಆ ಬಳಿಕ ಬಿಡುಗಡೆ ಆದ ‘ವಾಲ್ಟರ್ ವೀರಯ್ಯ’, ‘ವೀರ ನರಸಿಂಹ ರೆಡ್ಡಿ’ (ಬಾಲಕೃಷ್ಣ ನಟಿಸಿರುವ ಚಿತ್ರ) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ಸಹಾಯ ಆಯ್ತು’ ಎಂದಿದ್ದಾರೆ.
‘ವಿನಯ ನನ್ನ ನೈಸರ್ಗಿತ ಗುಣ. ನಾನು ಆಕ್ರೋಶದಿಂದ ಮಾತನಾಡುವವನಲ್ಲ. ಅದು ಸಿಎಂ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯೇ ಆಗಿರಲಿ. ವಿನಯದಿಂದಲೇ ಮಾತನಾಡುತ್ತೇನೆ. ಎರಡೂ ಕಡೆಯಿಂದ ಗೌರವ ವ್ಯಕ್ತವಾಗುವಂತೆಯೇ ನನ್ನ ಮಾತು ಇರುತ್ತದೆ’ ಎಂದು ಚಿರಂಜೀವಿ ಹೇಳಿದ್ದಾರೆ. ಆ ಮೂಲಕ ತಮ್ಮ ವಿನಯಮಯ ವರ್ತನೆಯನ್ನು ಟೀಕೆ ಮಾಡಿದ ಬಾಲಯ್ಯಗೆ ಅದೇ ವಿನಯದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




