ದೊಡ್ಡ ಸಂಭಾವನೆ ಪಡೆದು ತೆಲುಗಿಗೆ ಅಕ್ಷಯ್ ಕುಮಾರ್ ಎಂಟ್ರಿ, ಶಿವಣ್ಣ ಮಾಡಬೇಕಿದ್ದ ಪಾತ್ರದಲ್ಲಿ ನಟನೆ

|

Updated on: May 08, 2024 | 1:06 PM

ಶಿವರಾಜ್ ಕುಮಾರ್ ನಟಿಸಬೇಕಿದ್ದ ಪಾತ್ರವೊಂದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಕೆಲವೇ ದಿನಗಳ ಶೂಟಿಂಗ್​ಗೆ ಭಾರಿ ಮೊತ್ತದ ಸಂಭಾವನೆಯನ್ನು ಅಕ್ಷಯ್ ಕುಮಾರ್ ಪಡೆದಿದ್ದಾರೆ.

ದೊಡ್ಡ ಸಂಭಾವನೆ ಪಡೆದು ತೆಲುಗಿಗೆ ಅಕ್ಷಯ್ ಕುಮಾರ್ ಎಂಟ್ರಿ, ಶಿವಣ್ಣ ಮಾಡಬೇಕಿದ್ದ ಪಾತ್ರದಲ್ಲಿ ನಟನೆ
ಅಕ್ಷಯ್ ಕುಮಾರ್-ಶಿವರಾಜ್ ಕುಮಾರ್
Follow us on

ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ (Shiva Rajkumar) ನಟಿಸಬೇಕಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಈಗಾಗಲೇ ತೆಲುಗು ಸಿನಿಮಾದ ಚಿತ್ರೀಕರಣವನ್ನು ಮುಗಿಸಿ, ಹಿಂದಿ ಸಿನಿಮಾದ ಶೂಟಿಂಗ್​ಗೆ ಮರಳಿದ್ದಾರೆ. ಅಕ್ಷಯ್, ಮೊದಲ ತೆಲುಗು ಸಿನಿಮಾದಲ್ಲಿ ನಟಿಸಲು ಭಾರಿ ದೊಡ್ಡ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಈ ಹಿಂದೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಇದು ಅವರ ಮೊದಲ ತೆಲುಗು ಸಿನಿಮಾ.

ಡಾ ರಾಜ್​ಕುಮಾರ್ ನಟಿಸಿದ್ದ ಕನ್ನಡದ ಐಕಾನಿಕ್ ಸಿನಿಮಾ ‘ಬೇಡರ ಕಣ್ಣಪ್ಪ’ ಈಗ ತೆಲುಗಿನಲ್ಲಿ ‘ಕಣ್ಣಪ್ಪ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸುವಂತೆ ಶಿವರಾಜ್ ಕುಮಾರ್ ಅವರನ್ನು ಕೇಳಲಾಗಿತ್ತು. ಆದರೆ ಅವರು ಈಗಾಗಲೇ ‘ಶಿವ ಮೆಚ್ಚಿದ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದ ಕಾರಣ ತಾವು ‘ಕಣ್ಣಪ್ಪ’ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರು. ಬಳಿಕ ಆ ಪಾತ್ರವನ್ನು ಅಕ್ಷಯ್ ಕುಮಾರ್ ಅವರಿಗೆ ನೀಡಲಾಗಿದ್ದು, ಅವರು ಈಗಾಗಲೇ ಸಿನಿಮಾದಲ್ಲಿ ನಟಿಸಿ, ಹಿಂದಿಯ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾದ ಚಿತ್ರೀಕರಣಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ನಟನೆಯ ‘ಹೇ ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಹೇಗಾಗಿದ್ದಾರೆ ನೋಡಿ..

ಅಕ್ಷಯ್ ಕುಮಾರ್ ಕೇವಲ ನಾಲ್ಕು ದಿನಗಳ ಡೇಟ್ಸ್ ಅನ್ನು ‘ಕಣ್ಣಪ್ಪ’ ಸಿನಿಮಾಕ್ಕಾಗಿ ನೀಡಿದ್ದರು. ಈ ನಾಲ್ಕು ದಿನಗಳ ಶೂಟಿಂಗ್​ಗಾಗಿ ಅಕ್ಷಯ್ ಕುಮಾರ್​ಗೆ ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಹಿಂದಿಯಲ್ಲಿ ಈಗಾಗಲೇ ‘ಓಎಂಜಿ 2’ ಸಿನಿಮಾದಲ್ಲಿ ಶಿವನ ಅಂಶದ ಪಾತ್ರದಲ್ಲಿ ನಟಿಸಿದ್ದ ಅಕ್ಷಯ್ ಕುಮಾರ್, ಇಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು ಆದರೆ ಪ್ರಭಾಸ್ ಸಹ ಆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದಿದ್ದರು. ಆದರೆ ಸಿನಿಮಾದ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

‘ಕಣ್ಣಪ್ಪ’ ಸಿನಿಮಾದಲ್ಲಿ ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೋಹನ್​ಲಾಲ್ ಸಹ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಟರಾದ ಮೋಹನ್​ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ ಅವರುಗಳು ಸಹ ಇದ್ದಾರೆ. ತೆಲುಗಿನ ಕೆಲವು ಜನಪ್ರಿಯ ಯುವ ನಟ-ನಟಿಯರು ಸಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಆಂಧ್ರ-ತೆಲಂಗಾಣ ಸೇರಿದಂತೆ ವಿದೇಶಗಳಲ್ಲಿಯೂ ಮಾಡಲಾಗಿದೆ. ಸಿನಿಮಾವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ಮಂಚು ವಿಷ್ಣು ಅವರ ತಂದೆ ಮೋಹನ್ ಬಾಬು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಂಗೀತ ನೀಡುತ್ತಿರುವುದು ಮಣಿಶರ್ಮ ಮತ್ತು ಸ್ಟಿಫನ್ ದೇವಸ್ಸಿ. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ