ಅಕ್ಷಯ್ ಕುಮಾರ್-ಅರ್ಷದ್ ವಾರ್ಸಿ ಸಿನಿಮಾಕ್ಕೆ ಆರಂಭದಲ್ಲಿಯೇ ಸಂಕಷ್ಟ
ಅಕ್ಷಯ್ ಕುಮಾರ್ಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಅವರ ನಟನೆಯ ಸಿನಿಮಾಗಳು ಒಂದರ ಹಿಂದೊಂದು ಸೋಲುತ್ತಿವೆ. ಇದರ ಬೆನ್ನಲ್ಲೆ ಇದೀಗ ಅವರ ಹೊಸ ಸಿನಿಮಾವೊಂದು ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ಸಂಕಷ್ಟಕ್ಕೆ ಗುರಿಯಾಗಿದೆ.
ಅಕ್ಷಯ್ ಕುಮಾರ್ (Akshay Kumar) ಸಮಯ ಯಾಕೋ ಸರಿಯಿದ್ದಂತಿಲ್ಲ. ಅವರು ನಟಿಸಿರುವ ಸಿನಿಮಾಗಳು ಸಾಲು-ಸಾಲಾಗಿ ಸೋಲುತ್ತಿವೆ. ಇತ್ತೀಚೆಗೆ ತೆರೆ ಕಂಡ ‘ಬಡೆ ಮಿಯಾ ಚೊಟೆ ಮಿಯಾ’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆಯನ್ನಷ್ಟೆ ಮಾಡಿದೆ. ಇದೇ ಕಾರಣಕ್ಕೋ ಏನೋ ಈ ಹಿಂದೆ ತಮಗೆ ಗೆಲುವು ನೀಡಿದ್ದ ಸಿನಿಮಾಗಳ ಸೀಕ್ವೆಲ್ ಗಳಲ್ಲಿ ನಟಿಸುವ ಪ್ರಯೋಗಕ್ಕೆ ಅಕ್ಕಿ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈ ಹಿಂದೆ ಹಿಟ್ ಎನಿಸಿಕೊಂಡಿದ್ದ ಜಾಲಿ ಎಲ್ಎಲ್ಬಿ 2 ಸಿನಿಮಾದ ಸೀಕ್ವೆಲ್ ಜಾಲಿ ಎಲ್ಎಲ್ಬಿ 3 ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ಶುರುವಾದ ಕೂಡಲೇ ಸಿನಿಮಾಕ್ಕೆ ಸಮಸ್ಯೆಯೊಂದು ಎದುರಾಗಿದೆ.
‘ಜಾಲಿ ಎಲ್ಎಲ್ಬಿ’ ಸಿನಿಮಾ ಕೋರ್ಟ್ ರೂಂ ಡ್ರಾಮಾ ಆಗಿದ್ದ ಹಾಸ್ಯದ ಮೂಲಕ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ತೋರಿಸುವ ಜೊತೆಗೆ ಗಂಭೀರ ಪ್ರಕರಣವೊಂದನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡುವ ಕತೆ ಒಳಗೊಂಡಿದೆ. ಮೊದಲೆರಡು ಸಿನಿಮಾಗಳಲ್ಲಿ ಈ ಪ್ರಯೋಗ ದೊಡ್ಡ ಯಶಸ್ಸನ್ನೇ ನೀಡಿದೆ. ಇದೀಗ ‘ಜಾಲಿ ಎಲ್ಎಲ್ಬಿ 3’ ಸಿನಿಮಾ ಪ್ರಾರಂಭವಾಗಲಿದ್ದು, ಸಿನಿಮಾದ ಪ್ರೋಮೋ ಬಿಡುಗಡೆ ಆಗಿದೆ. ಆದರೆ ಅದರ ಬೆನ್ನಲ್ಲೆ ವಕೀಲರೊಬ್ಬರು ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಚಿತ್ರೀಕರಣ ಅಜ್ಮೇರ್ನಲ್ಲಿ ನಡೆಯುತ್ತಿದ್ದು, ಜಿಲ್ಲೆಯ ಬಾರ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಬನ್ ಅವರು ‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ‘ಜಾಲಿ ಎಲ್ಎಲ್ಬಿ’ ಸಿನಿಮಾ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನೆ ಮಾಡಿದೆ. ಇದೇ ಸರಣಿಯ ಈ ಹಿಂದಿನ ಎರಡು ಸಿನಿಮಾಗಳಲ್ಲಿ ನ್ಯಾಯಾಲಯದ ಬಗ್ಗೆ ಗೇಲಿ ಮಾಡಲಾಗಿದೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೇಲಿ ಮಾಡಲಾಗಿದೆ. ಹಾಗಾಗಿ ನ್ಯಾಯಾಂಗದ ಪಾವಿತ್ರ್ಯತೆ ಕಾಪಾಡಲು ಸಿನಿಮಾಕ್ಕೆ ತಡೆ ನೀಡಬೇಕೆಂದು ಚಂದ್ರಬನ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಅಕ್ಷಯ್ ಕುಮಾರ್ ನಟನೆಯ ‘ಹೇ ಬೇಬಿ’ ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಹೇಗಾಗಿದ್ದಾರೆ ನೋಡಿ..
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಚಂದ್ರಬನ್, ‘ಜಾಲಿ ಎಲ್ಎಲ್ಬಿ’ಯ ಮೊದಲೆರಡು ಸಿನಿಮಾಗಳನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿ ಹಾಕಲಾಗಿದೆ. ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ಪ್ರಧಾನ ನಟರಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹಾಗೂ ದೇಶದ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂಬುದು ಮೊದಲೆರಡು ಸಿನಿಮಾ ನೋಡಿದರೆ ಅರ್ಥವಾಗುತ್ತದೆ. ‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಚಿತ್ರೀಕರಣ ಅಜ್ಮೀರ್ ಮತ್ತು ಅದರ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದೆ. ಅಜ್ಮೇರ್ನ ಡಿಆರ್ಎಂ ಕಚೇರಿಯಲ್ಲಿಯೂ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸಮಯದಲ್ಲಿ ಸಹ ಸಿನಿಮಾದ ನಟ-ನಟಿಯರು ಅಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಚಿತ್ರೀಕರಣವನ್ನು ಈ ಕೂಡಲೇ ನಿಲ್ಲಿಸಬೇಕು’ ಎಂದಿದ್ದಾರೆ.
‘ಜಾಲಿ ಎಲ್ಎಲ್ಬಿ’ ಸಿನಿಮಾದಲ್ಲಿ ನ್ಯಾಯಾಲಯದಲ್ಲಿ ನಡೆಯುವ ಪ್ರಸಂಗಗಳನ್ನು ತಮಾಷೆ ರೀತಿಯಲ್ಲಿ ತೋರಿಸಲಾಗಿದೆ. ವಕೀಲರು, ನ್ಯಾಯಾಧೀಶರ ಬಗ್ಗೆ ತಮಾಷೆ, ವ್ಯಂಗ್ಯಗಳು ಸಹ ಸಿನಿಮಾದಲ್ಲಿವೆ. ಮೊದಲ ‘ಜಾಲಿ ಎಲ್ಎಲ್ಬಿ’ ಸಿನಿಮಾನಲ್ಲಿ ಅರ್ಷದ್ ವಾರ್ಸಿ ನಾಯಕನ ಪಾತ್ರದಲ್ಲಿ ನಟಿಸಿದ್ದರು. ಎರಡನೇ ‘ಜಾಲಿ ಎಲ್ಎಲ್ಬಿ’ ಸಿನಿಮಾನಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ನಟಿಸಿದ್ದರು. ಇದೀಗ ಮೂರನೇ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಹುಮಾ ಖುರೇಷಿ ಸಹ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ