ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಇಡಿ ವಿಚಾರಣೆ: ದ್ವೇಷ ರಾಜಕಾರಣವೇ?
Allu Aravind: ಅಲ್ಲು ಅರ್ಜುನ್ ಅವರ ಕುಟುಂಬಕ್ಕೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಕಾಲ್ತುಳಿತ ಪ್ರಕರಣ, ಅಲ್ಲು ಅರ್ಜುನ್ಗೆ ಒಂದು ದಿನದ ಜೈಲು ಇನ್ನೂ ಕೆಲವು ವಿವಾದದಗಳ ಬಳಿಕ ಈಗ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಹೆಸರು 101 ಕೋಟಿ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಕೇಳಿ ಬಂದಿದ್ದು, ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಲ್ಲು ಕುಟುಂಬಕ್ಕೆ ಸಮಸ್ಯೆಗಳೇ ಕಡಿಮೆ ಆಗುತ್ತಿಲ್ಲ. ‘ಪುಷ್ಪ 2’ ಸಿನಿಮಾದ ಬಳಿಕ ಒಂದರ ಹಿಂದೊಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇದೆ. ‘ಪುಷ್ಪ 2’ (Pushpa 2) ಬಳಿಕ ಕಾಲ್ತುಳಿತ ಘಟನೆ ನಡೆಯಿತು, ಆ ಬಳಿಕ ಅಲ್ಲು ಅರ್ಜುನ್ ಮೇಲೆ ಪ್ರಕರಣ ದಾಖಲಾಗಿ ಒಂದು ದಿನ ಜೈಲು ಸಹ ಸೇರಬೇಕಾಯ್ತು. ಅಲ್ಲು ಅರ್ಜುನ್ ಮನೆಯ ಬಳಿ ಗಲಾಟೆಯೂ ನಡೆಯಿತು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ (Allu Aravind) ಹೇಳಿಕೆ ವಿರುದ್ಧ ಮೆಗಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ಆರೋಪವೂ ಅಲ್ಲು ಅರವಿಂದ್ ವಿರುದ್ಧ ಕೇಳಿ ಬಂತು. ಇದೀಗ ಅಲ್ಲು ಅರವಿಂದ್ ವಿರುದ್ಧ 100 ಕೋಟಿ ವಂಚನೆ ಆರೋಪ ಕೇಳಿ ಬಂದಿದ್ದು, ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್ಗೆ 101.54 ಕೋಟಿ ರೂಪಾಯಿ ಹಣ ವಂಚನೆ ಮಾಡಿದ ಆರೋಪ ಅಲ್ಲು ಅರವಿಂದ್ ಮೇಲೆ ಕೇಳಿ ಬಂದಿದ್ದು, ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆರ್ಟಿಪಿಎಲ್ ಸಂಸ್ಥೆಯು ವಿವಿಧ ಬ್ಯಾಂಕುಗಳಿಗೆ ನೂರಾರು ಕೋಟಿ ರೂಪಾಯಿ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕರ್ನೂಲು, ಹೈದರಾಬಾದ್, ಗಾಜಿಯಾಬಾದ್ ಇನ್ನಿತರೆ ಕಡೆಗಳಲ್ಲಿ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸಲಿರುವ ಅಲ್ಲು ಅರ್ಜುನ್, ಹೆಸರೇನು ಗೊತ್ತೆ?
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರವಿಂದ್ ಸೇರಿದಂತೆ ಇನ್ನೂ ಹಲವು ಪ್ರಮುಖ ಉದ್ಯಮಿಗಳು, ರಾಜಕಾರಣಿಗಳನ್ನು ವಿಚಾರಣೆ ನಡೆಸಲಾಗಿದೆ. ಸಿಬಿಐ ಸಹ ಬೆಂಗಳೂರಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದೆ. ಇಡಿ ಸಹ ತನಿಖೆ ನಡೆಸುತ್ತಿದೆ. ವಿಚಾರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಬಳಿ ಮಾತನಾಡಿರುವ ಅಲ್ಲು ಅರವಿಂದ್, ‘2017ಕ್ಕೆ ಖರೀದಿ ಮಾಡಿರುವ ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ಕಾನೂನನ್ನು ಗೌರವಿಸುವ ನಾಗರೀಕನಾಗಿ ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನಾನು ನೀಡಿದ್ದೇನೆ. ಪ್ರಕರಣದ ತನಿಖೆ ಇನ್ನೂ ಜಾರಿಯಲ್ಲಿರುವ ಕಾರಣದಿಂದಾಗಿ ಪ್ರಸ್ತುತ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತಿಲ್ಲ’ ಎಂದಿದ್ದಾರೆ.
ಪವನ್ ಕಲ್ಯಾಣ್ ಅನ್ನು ಎದುರು ಹಾಕಿಕೊಂಡಿದ್ದಕ್ಕೆ ಅಲ್ಲು ಅರವಿಂದ್ ವಿರುದ್ಧ ಇಡಿ ದಾಳಿ ಆಗಿದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲು ಅರವಿಂದ್ ವಿರುದ್ಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Sat, 5 July 25