‘ರಾಮಾಯಣ’ ಗ್ಲಿಂಪ್ಸ್, ಯಶ್ಗೆ ಭೇಷ್ ಎಂದ ನಟ್ಟಿಗರು, ರಣ್ಬೀರ್ ಬಗ್ಗೆ ಟೀಕೆ ಏಕೆ?
Ramayana movie: ರಣ್ಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ರಾಮಾಯಣ ಗ್ಲಿಂಪ್ಸ್ ನೋಡಿದ ನೆಟ್ಟಿಗರು ರಣ್ಬೀರ್ ಕಪೂರ್ ಅವರ ಪಾತ್ರವನ್ನು ಟೀಕೆ ಮಾಡಿದ್ದು, ಯಶ್ ಪಾತ್ರವನ್ನು ಬಹುವಾಗಿ ಕೊಂಡಾಡಿದ್ದಾರೆ. ಅಷ್ಟಕ್ಕೂ ರಣ್ಬೀರ್ ಕಪೂರ್ ಅವರನ್ನು ಟೀಕೆ ಮಾಡುತ್ತಿರುವುದಕ್ಕೆ ಕಾರಣ ಏನು?

ರಣ್ಬೀರ್ ಕಪೂರ್ (Ranbir Kapoor), ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಭಾರಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಅದ್ಧೂರಿತನ ನಿನ್ನೆ ಬಿಡುಗಡೆ ಆದ ಮೂರು ನಿಮಿಷದ ಗ್ಲಿಂಪ್ಸ್ನಲ್ಲಿ ಧಾರಾಳವಾಗಿ ಕಂಡಿ ಬಂದಿದೆ. ಮೂರು ನಿಮಿಷದ ಗ್ಲಿಂಪ್ಸ್ನ ಕೊನೆಯ ಕೆಲ ಸೆಕೆಂಡುಗಳಲ್ಲಿ ರಣ್ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಯಶ್, ರಾವಣನ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಬ್ಬರ ದೃಶ್ಯಗಳು ಕೆಲವು ಸೆಕೆಂಡುಗಳು ಮಾತ್ರವೇ ಟೀಸರ್ನಲ್ಲಿ ಕಾಣುತ್ತವೆ. ಗ್ಲಿಂಪ್ಸ್ ನೋಡಿದ ನೆಟ್ಟಿಗರು ರಣ್ಬೀರ್ ಕಪೂರ್ ಅವರನ್ನು ಟೀಕೆ ಮಾಡಿದ್ದು, ಯಶ್ ಅವರನ್ನು ಕೊಂಡಾಡಿದ್ದಾರೆ.
ರಣ್ಬೀರ್ ಕಪೂರ್ ಅವರ ಬಗೆಗಿನ ಬಹುತೇಕ ಟೀಕೆಗಳು ಪೂರ್ವಾಗ್ರಹ ಪೀಡಿತ ಎನ್ನಬಹುದಾದ ಟೀಕೆಗಳೇ ಆಗಿವೆ. ದನದ ಮಾಂಸ ತಿನ್ನುವವ ರಾಮನ ಪಾತ್ರ ಮಾಡಿದ್ದಾನೆ, ಧರ್ಮದ ಬಗ್ಗೆ ಗೌರವ ಇಲ್ಲದವ ರಾಮನ ಪಾತ್ರ ಮಾಡಿದ್ದಾನೆ ಎಂಬಿತ್ಯಾದಿ ಟೀಕೆಗಳನ್ನು ಮಾಡಲಾಗಿದೆ. ಕೆಲವರು ಮಾತ್ರ, ರಣ್ಬೀರ್ ಕಪೂರ್ ಅವರಿಗಿಂತಲೂ ರಾಮ್ ಚರಣ್, ರಾಮನ ಪಾತ್ರಕ್ಕೆ ಹೆಚ್ಚು ಸೂಕ್ತವಾಗಿರುತ್ತಿದ್ದರು. ರಣ್ಬೀರ್ ಕಪೂರ್ಗೆ ಮುಖದಲ್ಲಿ ಶ್ರೀರಾಮನ ಘನತೆ ಕಾಣುವುದಿಲ್ಲ. ಆತನ ದೇಹ ಭಾಷೆ ಪೌರಾಣಿಕ ಪಾತ್ರಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ.
ನಿನ್ನೆ ಬಿಡುಗಡೆ ಆದ ಟೀಸರ್ನಲ್ಲಿ ರಣ್ಬೀರ್ ಕಪೂರ್ ಅವರ ದೃಶ್ಯದ ಸ್ಕ್ರೀನ್ ಶಾಟ್ ಅನ್ನು ‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್ ಪಾತ್ರ ಶ್ರೀರಾಮನ ವೇಷ ಧರಿಸಿದಾಗಿನ ಚಿತ್ರಕ್ಕೆ ಹೋಲಿಸಿ ನೋಡಲಾಗುತ್ತಿದೆ. ರಾಮನ ಪಾತ್ರಕ್ಕೆ ರಣ್ಬೀರ್ ಕಪೂರ್ ಅವರಿಗಿಂತಲೂ ರಾಮ್ ಚರಣ್ ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯವೇ ಹೆಚ್ಚಾಗಿ ವ್ಯಕ್ತವಾಗಿದೆ.
ಇದನ್ನೂ ಓದಿ:ಯಶ್ ಕಾರಣಕ್ಕೆ ‘ರಾಮಾಯಣ’ದಲ್ಲಿ ಅವಕಾಶ ಕಳೆದುಕೊಂಡ ಹಿಂದಿ ನಟ
ಇನ್ನು ಯಶ್ ಬಗ್ಗೆ ಹಲವರು ಕೊಂಡಾಡಿದ್ದು, ಯಶ್, ‘ರಾಮಾಯಣ’ ಸಿನಿಮಾಕ್ಕೆ ಜೋಶ್ ತುಂಬಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ನಾಯಕ ನಟಿಸಿರುವ ಒಂದು ಸಿನಿಮಾ ಆ ಸಿನಿಮಾದ ನಾಯಕನ ಕಾರಣಕ್ಕೆ ಅಲ್ಲದೆ ವಿಲನ್ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ ಎಂದು ಯಶ್ ಅವರ ಕ್ರೇಜ್ ಅನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಯಶ್ ಅವರ ಒಂದು ಕಣ್ಣನ್ನು ಮಾತ್ರ ನಿನ್ನೆಯ ಟೀಸರ್ನಲ್ಲಿ ತೋರಿಸಲಾಗಿದೆ. ಅದಕ್ಕೂ ಕೆಲವರು ಕಮೆಂಟ್ ಮಾಡಿದ್ದು, ಕೇವಲ ಒಂದು ಕಣ್ಣು ತೋರಿಸಿದ್ದಕ್ಕೆ ಈ ಕ್ರೇಜ್ ಇನ್ನೇನಾದರೂ ಮುಖ ತೋರಿಸಿದ್ದಿದ್ದರೆ ಕ್ರೇಜ್ ಮೂರು ಪಟ್ಟಾಗಿರುತ್ತಿತ್ತು ಎಂದಿದ್ದಾರೆ.
‘ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದು, ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಸ್ಕರ್ ವಿಜೇತ ಡಿಇಎನ್ಜಿ ಸ್ಟುಡಿಯೋ, ಸಿನಿಮಾದ ವಿಎಫ್ಎಕ್ಸ್ ಕಾರ್ಯ ಮಾಡಿದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹನ್ಜ್ ಜೈಮರ್ ಮತ್ತು ಎಆರ್ ರೆಹಮಾನ್ ಅವರುಗಳು ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು 2026ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ