ಕರೀನಾ ಕಪೂರ್ ಬೇಕೆಂದು ಹಠ ಹಿಡಿದಿದ್ದ ಅಕ್ಷಯ್ ಕುಮಾರ್: ನಿರ್ಮಾಪಕ ಮಾಡಿದ್ದೇನು?
Akshay Kumar-Kareena Kapoor: ಅಕ್ಷಯ್ ಕುಮಾರ್ ಬಾಲಿವುಡ್ನ ಸ್ಟಾರ್ ನಟ. ಅಕ್ಷಯ್ ಕುಮಾರ್ ತಮ್ಮ ವೃತ್ತಿಪರತೆಯಿಂದ ಬಹಳ ಖ್ಯಾತರು. ಹಲವಾರು ನಿರ್ಮಾಪಕರು ಅವರೊಟ್ಟಿಗೆ ಕೆಲಸ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ನಿರ್ದೇಶಕರ ನಟ ಎಂಬ ಹೆಸರು ಅವರಿಗಿದೆ. ಆದರೆ ಮೊದಲು ಅವರು ಹೀಗಿರಲಿಲ್ಲವಂತೆ. ತಮ್ಮ ಸಿನಿಮಾಕ್ಕೆ ಇಂಥಹುದೇ ನಟಿ ಬೇಕು, ಇಂಥಹುದೇ ನಿರ್ದೇಶಕ ಬೇಕೆಂದು ನಿರ್ಮಾಪಕರ ಬಳಿ ಷರತ್ತು ಹಾಕುತ್ತಿದ್ದರಂತೆ. ಹಿರಿಯ ನಿರ್ಮಾಪಕರೊಬ್ಬರು ಆ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಹೀರೋಗಳು, ತಮ್ಮ ಸಿನಿಮಾದಲ್ಲಿ ಇಂಥಹದೇ ನಟಿ, ಇಂಥಹದೇ ಸಹ ನಟರು ಇರಬೇಕು ಎಂದು ಷರತ್ತು ಹಾಕುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೆಲ ಸ್ಟಾರ್ ನಟರಂತೂ ತಮ್ಮ ಸಿನಿಮಾಗಳಿಗೆ ತಮ್ಮ ಆಪ್ತರಿಗೆ ‘ನೌಕರಿ’ ಕೊಡಿಸುವುದು ದಕ್ಷಿಣ ಭಾರತದಲ್ಲಿ ತೀರಾ ಸಾಮಾನ್ಯ. ಇದನ್ನು ಹೆಮ್ಮೆಯಿಂದ ನಟರುಗಳು ಹೇಳಿಕೊಳ್ಳುತ್ತಾರೆ. ಆದರೆ ಬಾಲಿವುಡ್ನಲ್ಲಿ ಇಂಥಹಾ ಸಂಪ್ರದಾಯ ಮೊದಲೆಲ್ಲ ಕಡಿಮೆ ಇತ್ತಂತೆ, ಆದರೆ ಬರ ಬರುತ್ತಾ ಅಲ್ಲಿಯೂ ಇದು ಸಾಮಾನ್ಯ ಆಯ್ತಂತೆ. ಈ ಬಗ್ಗೆ ಹಿರಿಯ ನಿರ್ಮಾಪಕರೊಬ್ಬರು ಮಾತನಾಡಿದ್ದು, ಅಕ್ಷಯ್ ಕುಮಾರ್ (Akshay Kumar), ನನ್ನ ಸಿನಿಮಾಕ್ಕೆ ಕರೀನಾ ಕಪೂರ್ ಅವರೇ ನಾಯಕಿ ಆಗಬೇಕು ಎಂದು ಪಟ್ಟು ಹಿಡಿದಿದ್ದರಂತೆ.
ಪಹ್ಲಾಜ್ ನಿಲಾನಿ, ಬಾಲಿವುಡ್ನ ಬಲು ಹಿರಿಯ ಸಿನಿಮಾ ನಿರ್ಮಾಪಕ ಮತ್ತು ವಿತರಕ. ಗೋವಿಂದ, ಶತ್ರುಘನ್ ಸಿನ್ಹಾ, ಧರ್ಮೇಂದ್ರ, ಅಮಿತಾಬ್ ಬಚ್ಚನ್ ಇನ್ನೂ ಹಲವು ದಿಗ್ಗಜರುಗಳ ಜೊತೆಗೆ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಇನ್ನೂ ಕೆಲವು ಸ್ಟಾರ್ ಹೀರೋಗಳಿಗೂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪಹ್ಲಾಜ್ ನಿಲಾನಿ, ಬಾಲಿವುಡ್ನ ಸ್ಟಾರ್ ನಟರುಗಳ ಕರ್ಮಕಾಂಡಗಳನ್ನು ತೆರೆದಿಟ್ಟಿದ್ದಾರೆ. ಹೆಸರುಗಳ ಸಮೇತ ಆರೋಪಗಳನ್ನು ಮಾಡಿದ್ದಾರೆ.
ಈಗ ಅಕ್ಷಯ್ ಕುಮಾರ್ ಸ್ಟಾರ್ ನಟ, ಬಾಲಿವುಡ್ನ ಗೌರವಾನ್ವಿತ ನಟರಲ್ಲಿ ಒಬ್ಬರು. ವೃತ್ತಿಪರತೆಗೆ ಉದಾಹರಣೆಯಾಗಿ ಅಕ್ಷಯ್ ಹೆಸರು ತೆಗೆದುಕೊಳ್ಳಲಾಗುತ್ತದೆ. ಆದರೆ ಪೆಹ್ಲಾಜ್ ನಿಲಾನಿ ಅವರ ಸಿನಿಮಾನಲ್ಲಿ ನಟಿಸಲು ತಮಗೆ ಇಂಥಹುದೇ ನಾಯಕಿ ಆಗಬೇಕು ಎಂದು ಹಠ ಹಿಡಿದಿದ್ದರಂತೆ ಅಕ್ಷಯ್ ಕುಮಾರ್. ಪಹ್ಲಾಜ್ ನಿಲಾನಿ ಅವರು 2003 ರಲ್ಲಿ ‘ತಲಾಷ್’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಸಿನಿಮಾಕ್ಕೆ ಅಕ್ಷಯ್ ಕುಮಾರ್ ನಾಯಕ. ಆ ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಅನ್ನೇ ಆಯ್ಕೆ ಮಾಡಬೇಕು ಎಂದು ಷರತ್ತು ಹಾಕಿದ್ದರಂತೆ ಅಕ್ಷಯ್ ಕುಮಾರ್.
ಇದನ್ನೂ ಓದಿ:ಅಕ್ಷಯ್ ಕುಮಾರ್ ಮೊದಲ ಸಂಭಾವನೆ ಇಷ್ಟೇನಾ? ಮೊಬೈಲ್ ಕೂಡ ಬರಲ್ಲ
‘ಆ ವರೆಗೆ ಸಿನಿಮಾದಲ್ಲಿ ಯಾರು ನಟಿಸಬೇಕು ಎಂಬುದನ್ನು ನಿರ್ಮಾಪಕ ಹಾಗೂ ನಿರ್ದೇಶಕ ಆಯ್ಕೆ ಮಾಡುತ್ತಿದ್ದರು. ಆದರೆ ಅಕ್ಷಯ್ ಕುಮಾರ್ ಮೊದಲ ಬಾರಿಗೆ ನನಗೆ ಇಂಥಹುದೇ ನಾಯಕಿ ಆಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಸಿನಿಮಾ ಮಾತುಕತೆಗೆ ಹೋದಾಗ, ಬೇಕಾದರೆ ನಾಳೆಯೇ ಸಿನಿಮಾ ಶುರು ಮಾಡೋಣ, ನೀವು ನನಗೆ ಎಷ್ಟು ಬೇಕಾದರೂ ಕೊಡಿ, ಆದರೆ ಸಿನಿಮಾದ ನಾಯಕಿ ಕರೀನಾ ಕಪೂರ್ರೇ ಆಗಬೇಕು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾಗಿ ಪಹ್ಲಾಜ್ ನಿಲಾನಿ ಹೇಳಿದ್ದಾರೆ.
‘ಆಗೆಲ್ಲ ಹಿರಿಯ ನಾಯಕರು ಕಡಿಮೆ ವಯಸ್ಸಿನ ನಾಯಕಿಯರೊಟ್ಟಿಗೆ ನಟಿಸಲು ಇಷ್ಟಪಡುತ್ತಿದ್ದರು. ಇದರಿಂದ ತಮ್ಮ ವಯಸ್ಸೂ ಸಹ ಚಿಕ್ಕದಾಗಿ ಕಾಣುತ್ತದೆ ಎಂಬುದು ಅವರ ನಂಬಿಕೆ ಆಗಿತ್ತು. ಹಾಗಾಗಿ ಅಕ್ಷಯ್ ಕುಮಾರ್ ಸಹ, ಆಗಷ್ಟೆ ಚಿತ್ರರಂಗಕ್ಕೆ ಬಂದಿದ್ದ ಕರೀನಾ ಅವರೇ ತಮ್ಮ ಸಿನಿಮಾಕ್ಕೆ ನಾಯಕಿ ಆಗಬೇಕು ಎಂದು ಹಠ ಹಿಡಿದಿದ್ದರು, ಕೊನೆಗೆ ನಾನು ದುಬಾರಿ ಸಂಭಾವನೆ ಕೊಟ್ಟು ಕರೀನಾ ಅವರನ್ನು ಸಿನಿಮಾಕ್ಕೆ ನಾಯಕಿಯಾಗಿ ಕರೆತಂದೆ’ ಎಂದಿದ್ದಾರೆ ಪಹ್ಲಾಜ್. ‘ತಲಾಷ್’ ಸಿನಿಮಾ ಆಗಿನ ಕಾಲಕ್ಕೆ ಭಾರಿ ಬಜೆಟ್ ಸಿನಿಮಾ, ಆ ಸಿನಿಮಾಕ್ಕೆ 23 ಕೋಟಿ ಹಣ ಖರ್ಚು ಮಾಡಿದ್ದೆ ಎಂದಿದ್ದಾರೆ ಪಹ್ಲಾಜ್ ನಿಲಾನಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ