ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ’ ಚಿತ್ರದಿಂದ ದೊಡ್ಡ ಖ್ಯಾತಿ ಪಡೆದಿದ್ದಾರೆ. ಈ ಕಾರಣದಿಂದಲೇ ‘ಪುಷ್ಪ 2’ ಚಿತ್ರದ ಮೇಲೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಳ್ಳುವಂತೆ ಆಗಿದೆ. ಆದರೆ, ಚಿತ್ರತಂಡದವರು ಸಿನಿಮಾ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಹೌದು, ಈ ಮೊದಲು ಪೋಸ್ಟರ್ ರಿಲೀಸ್ ಮಾಡಿದ್ದ ತಂಡ, ಅಲ್ಲು ಅರ್ಜುನ್ ಬರ್ತ್ಡೇಗೆ (ಏಪ್ರಿಲ್ 8) ಟೀಸರ್ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಅವರು ರಿಲೀಸ್ ಮಾಡಿದ್ದು ಗ್ಲಿಂಪ್ಸ್ ಅಷ್ಟೇ ಅನ್ನೋದು ಅನೇಕರ ಅಭಿಪ್ರಾಯ.
ಅಲ್ಲು ಅರ್ಜುನ್ ಮುಖಕ್ಕೆ ಬಣ್ಣ ಬಳಿದುಕೊಂಡು, ಸೀರೆ ಉಟ್ಟುಕೊಂಡಿರೋ ಪೋಸ್ಟರ್ನ ಈ ಮೊದಲು ಕೂಡ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತದೇ ಲುಕ್ನ ದೃಶ್ಯವನ್ನು ರಿಲೀಸ್ ಮಾಡಲಾಗಿದೆ ಅಷ್ಟೇ. ಇದು ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ. ‘ನಾವು ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದೆವು’ ಎಂದಿದ್ದಾರೆ ಕೆಲವರು.
ಟೀಸರ್ ಎಂದರೆ ಹೊಸ ಹೊಸ ವಿಚಾರಗಳನ್ನು ರಿವೀಲ್ ಮಾಡಬೇಕು. ಕೆಲವೇ ಕೆಲವು ಕಲಾವಿದರ ಪಾತ್ರದ ಬಗ್ಗೆಯಾದರೂ ಮಾಹಿತಿ ರಿವೀಲ್ ಆಗಬೇಕು. ಆದರೆ, ಇಲ್ಲಿ ಅದ್ಯಾವುದೂ ಇಲ್ಲ. ಅಲ್ಲು ಅರ್ಜುನ್ ಅವರು ಸೀರೆಯಲ್ಲಿ ಎಂಟ್ರಿ ಕೊಡುತ್ತಾರೆ ಮತ್ತು ಕೆಲವರನ್ನು ಹೊಡೆದುರುಳಿಸುತ್ತಾರೆ. ಈ ಕಾರಣಕ್ಕೆ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದ ಫ್ಯಾನ್ಸ್ಗೆ ನಿರಾಸೆ ಆಗಿದೆ.
‘ಪುಷ್ಪ 2’ ರಿಲೀಸ್ಗೆ ಇನ್ನೂ ಕೆಲವು ತಿಂಗಳು ಬಾಕಿ ಇದೆ. ಹೀಗಾಗಿ, ಹೆಚ್ಚಿನದ್ದನ್ನು ಬಿಟ್ಟುಕೊಡಬಾರದು ಎಂಬುದು ತಂಡದ ಉದ್ದೇಶವೂ ಇರಬಹುದು. ಈ ಕಾರಣದಿಂದಲೇ ಹಳೆ ಪೋಸ್ಟರ್ಗೆ ಸಂಬಂಧಿಸಿದ ದೃಶ್ಯವನ್ನೇ ತಂಡ ಪ್ರೇಕ್ಷಕರ ಮುಂದೆ ಇಟ್ಟಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಬಂದ ರಶ್ಮಿಕಾ ಮಂದಣ್ಣ; ಬರ್ತ್ಡೇಗೆ ಪೋಸ್ಟರ್ ಗಿಫ್ಟ್
‘ಪುಷ್ಪ 2’ ತಂಡದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ