‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ
Thalapathy Vijay: ಸೆನ್ಸಾರ್ ಮಂಡಳಿಯು ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಪ್ರಕರಣ ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿದೆ. ಹೀಗಿರುವಾಗ ಸಿನಿಮಾದ ನಿರ್ಮಾಪಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಪ್ಪಂದದಂತೆ ಸಿನಿಮಾ ಬಿಡುಗಡೆ ಮಾಡದಿದ್ದರೆ ನಷ್ಟಪರಿಹಾರ ನೀಡಬೇಕೆಂದು ಒಟಿಟಿಯವರು ನಿರ್ಮಾಪಕರಿಗೆ ಎಚ್ಚರಿಸಿದ್ದಾರೆ.

ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಕಾರಣಕ್ಕೆ ತೀವ್ರ ಹಿನ್ನಡೆ ಆಗಿದ್ದು, ಈಗಾಗಲೇ ಬಿಡುಗಡೆ ದಿನಾಂಕ ಮುಂದೆ ಹೋಗಿ ನಿರ್ಮಾಪಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎಂತೆಂಥ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ, ರೀಮೇಕ್ ಸಿನಿಮಾ ಆಗಿರುವ ‘ಜನ ನಾಯಗನ್’ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಪ್ರಕರಣ ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿದೆ. ಹೀಗಿರುವಾಗ ಸಿನಿಮಾದ ನಿರ್ಮಾಪಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಪ್ಪಂದದಂತೆ ಸಿನಿಮಾ ಬಿಡುಗಡೆ ಮಾಡದಿದ್ದರೆ ನಷ್ಟಪರಿಹಾರ ನೀಡಬೇಕೆಂದು ಒಟಿಟಿಯವರು ನಿರ್ಮಾಪಕರಿಗೆ ಎಚ್ಚರಿಸಿದ್ದಾರೆ.
‘ಜನ ನಾಯಗನ್’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಮುಂಗಡವಾಗಿ ಅಮೆಜಾನ್ ಪ್ರೈಂ ವಿಡಿಯೋಕ್ಕೆ ಭಾರಿ ಮೊತ್ತಕ್ಕೆ ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಮಾರಾಟ ಮಾಡಿದ್ದರು. ಅಮೆಜಾನ್ ಜೊತೆಗಿನ ಒಪ್ಪಂದದಂತೆ ಸಿನಿಮಾದ ಬಿಡುಗಡೆ ದಿನಾಂಕದ ನಾಲ್ಕು ವಾರಗಳ ತರುವಾಯ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಬೇಕಿತ್ತು. ಒಪ್ಪಂದದ ಪ್ರಕಾರ ‘ಜನ ನಾಯಗನ್’ ಸಿನಿಮಾವನ್ನು ಅಮೆಜಾನ್ನಲ್ಲಿ ಬಿಡುಗಡೆ ಮಾಡಲು ಕೆಲವೇ ದಿನಗಳು ಬಾಕಿ ಇವೆ.
ಇದೀಗ ಅಮೆಜಾನ್ ಪ್ರೈಂ ವಿಡಿಯೋದವರು ನಿರ್ಮಾಪಕ ವೆಂಕಟ್ ನಾರಾಯಣ್ ಅವರಿಗೆ ಎಚ್ಚರಿಕೆ ನೀಡಿದ್ದು, ಒಂದೊಮ್ಮೆ ಒಪ್ಪಂದದ ಪ್ರಕಾರ ನಿಗದಿತ ಸಮಯಕ್ಕೆ ‘ಜನ ನಾಯಗನ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡದಿದ್ದಲ್ಲಿ ಭಾರಿ ಮೊತ್ತದ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದಿದ್ದಾರೆ. ಅಲ್ಲದೆ, ಸಿನಿಮಾ ಬಿಡುಗಡೆ ಮಾಡದೇ ಇದ್ದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ
‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿಯು ಪ್ರಮಾಣ ಪತ್ರವನ್ನು ನಿರಾಕರಿಸಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ಮೊದಲಿಗೆ ಸಿನಿಮಾದ ಪರವಾಗಿ ತೀರ್ಪು ಬಂದಿತ್ತು. ಆದರೆ ತೀರ್ಪು ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸಿಬಿಎಫ್ಸಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದು, ಸಿನಿಮಾದ ಪರವಾಗಿ ಆದೇಶ ನೀಡಿದ್ದ ಮದ್ರಾಸ್ ಹೈಕೋರ್ಟ್ ಸ್ವತಃ ತನ್ನದೇ ಆದೇಶಕ್ಕೆ ತಡೆ ನೀಡಿತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಬಂದಿದ್ದೂ ಆಗಿದೆ. ಜನವರಿ 27 ರಂದು ಪ್ರಕರಣದ ಬಗ್ಗೆ ಆದೇಶ ಹೊರಬೀಳಲಿದೆ.
‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕಾಗಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾದ ನಿರ್ಮಾಣ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Sun, 25 January 26




