
ಚಿತ್ರರಂಗದವರಿಗೂ ರಾಜಕೀಯದವರಿಗೂ ಹತ್ತಿರದ ನಂಟು ಇದೆ. ರಾಜಕೀಯದ ಅನೇಕ ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದೇ ರೀತಿ ಸಿನಿಮಾದವರು ರಾಜಕೀಯಕ್ಕೆ ಎಂಟ್ರಿ ನೀಡಿ ಗೆಲುವು ಕಂಡಿದ್ದೂ ಇದೆ. ಹಾಗಾಗಿ ಈ ಕ್ಷೇತ್ರದವರ ನಡುವೆ ಯಾವುದೇ ಭೇಟಿ ನಡೆದರೂ ಅಭಿಮಾನಿಗಳ ಕಣ್ಣು, ಕಿವಿ ಚುರುಕಾಗುತ್ತದೆ. ಈಗ ಜ್ಯೂ. ಎನ್ಟಿಆರ್ (Jr NTR) ಅಭಿಮಾನಿಗಳಿಗೂ ಹಾಗೆಯೇ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜ್ಯೂ. ಎನ್ಟಿಆರ್ ಭೇಟಿ ಆಗಿದ್ದಾರೆ. ಭಾನುವಾರ (ಆಗಸ್ಟ್ 21) ನಡೆದ ಈ ಭೇಟಿಯ ಸಂದರ್ಭದಲ್ಲಿ ತೆಗೆದ ಫೋಟೋಗಳು (Amit Shah Jr NTR Photos) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಮಿತ್ ಶಾ (Amit Shah) ಎದುರು ಜ್ಯೂ. ಎನ್ಟಿಆರ್ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಅವರ ವಿನಯವಂತ ವ್ಯಕ್ತಿತ್ವಕ್ಕೆ ಫ್ಯಾನ್ಸ್ ಭೇಷ್ ಎನ್ನುತ್ತಿದ್ದಾರೆ.
ಕಾರ್ಯನಿಮಿತ್ತ ಅಮಿತ್ ಶಾ ಅವರು ತೆಲಂಗಾಣಕ್ಕೆ ಬಂದಿದ್ದಾರೆ. ಈ ವೇಳೆ ಅವರು ಹೈದರಾಬಾದ್ನಲ್ಲಿ ಜ್ಯೂ. ಎನ್ಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜ್ಯೂ. ಎನ್ಟಿಆರ್ ಬಗ್ಗೆ ಮೆಚ್ಚುಗೆ ನುಡಿಗಳನ್ನು ಪೋಸ್ಟ್ ಮಾಡಿದ್ದಾರೆ.
‘ತೆಲುಗು ಚಿತ್ರರಂಗದ ರತ್ನ, ಅತ್ಯಂತ ಪ್ರತಿಭಾನ್ವಿತ ನಟ ಜ್ಯೂ. ಎನ್ಟಿಆರ್ ಅವರನ್ನು ಹೈದರಾಬಾದ್ನಲ್ಲಿ ಭೇಟಿಯಾಗಿ ಮಾತನಾಡಿದ್ದು, ಖುಷಿ ನೀಡಿದೆ’ ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ 14 ಸಾವಿರಕ್ಕೂ ಅಧಿಕ ಜನರು ಇದನ್ನು ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ‘ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿ ಮಾಡಿ ಮಾತನಾಡಿದ್ದಕ್ಕೆ ಖುಷಿ ಆಯಿತು’ ಎಂದು ಜ್ಯೂ. ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಜ್ಯೂ. ಎನ್ಟಿಆರ್ ಅವರಿಗೆ ಭರ್ಜರಿ ಬೇಡಿಕೆ ಇದೆ. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈ ವರ್ಷ ತೆರೆಕಂಡ ‘ಆರ್ಆರ್ಆರ್’ ಸಿನಿಮಾದಿಂದ ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚಾಗಿದೆ. ಹಿಂದಿ ಪ್ರೇಕ್ಷಕರು ವಲಯದಲ್ಲಿ ಅವರಿಗೆ ಅಭಿಮಾನಿಗಳ ಸಂಖ್ಯೆ ವೃದ್ಧಿಸಿದೆ. ಅವರು ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಜ್ಯೂ. ಎನ್ಟಿಆರ್ ಮತ್ತು ಅಮಿತ್ ಶಾ ಯಾವ ಕಾರಣಕ್ಕೆ ಭೇಟಿ ಆಗಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸೂಕ್ತ ಕಾರಣ ಇಲ್ಲದೆ ಇಂಥ ಭೇಟಿ ನಡೆಯಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:49 am, Mon, 22 August 22