‘ಕಾಗೆಗಳು ಕೂಗುತ್ತಿವೆ’; ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಅಮಿತಾಭ್ ಖಡಕ್ ತಿರುಗೇಟು
ನಟ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ವದಂತಿಗಳು ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸಿದ್ದವು. ಆದರೆ, ಇದು ಸಂಪೂರ್ಣ ಸುಳ್ಳು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಬಿಗ್ ಬಿ ಮೇ 16ರಂದು ನಾನಾವತಿ ಆಸ್ಪತ್ರೆಗೆ ನಿಯಮಿತ ತಪಾಸಣೆಗಾಗಿ ತೆರಳಿ, ತಕ್ಷಣ ಮನೆಗೆ ಮರಳಿದ್ದಾರೆ. ಅವರು ಸಂಪೂರ್ಣ ಆರೋಗ್ಯವಾಗಿದ್ದು, 'ಕಲ್ಕಿ 2898 ಎಡಿ' ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ಈ ವಿಷಯ ತಿಳಿದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಭಾರೀ ಆತಂಕ ಎದುರಾಗಿತ್ತು. ಅಮಿತಾಭ್ಗೆ ಈಗ 83 ವರ್ಷ ವಯಸ್ಸು. ಈ ಕಾರಣದಿಂದಲೇ ನಟನ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿತ್ತು. ಆದರೆ, ಇದೀಗ ಅವರ ಅಭಿಮಾನಿಗಳು ನಿಟ್ಟುಸಿರು ಬಿಡುವಂತಹ ಮತ್ತು ನಿರಾಳರಾಗುವಂತಹ ದೊಡ್ಡ ಅಪ್‌ಡೇಟ್ ಒಂದು ಹೊರಬಿದ್ದಿದೆ.
ಅಮಿತಾಭ್ ಬಚ್ಚನ್ ಅವರು ಮೇ 16ರಂದು ಆಸ್ಪತ್ರೆಗೆ ತೆರಳಿದ್ದು ನಿಜ. ಆದರೆ, ಅವರು ಆಸ್ಪತ್ರೆಗೆ ದಾಖಲಾಗಿಲ್ಲ, ಬದಲಿಗೆ ಅವರು ಕೇವಲ ನಿಯಮಿತ ತಪಾಸಣೆಗಾಗಿ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಿ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡಲು ಆರಂಭ ಆಗಿದ್ದವು. ಅಮಿತಾಭ್ ಅವರು ಮೇ 16ರಿಂದಲೇ ಮುಂಬೈನ ನಾನಾವತಿ ಆಸ್ಪತ್ರೆಯ ವಿಐಪಿ ವಿಭಾಗದಲ್ಲಿ ದಾಖಲಾಗಿದ್ದಾರೆ ಮತ್ತು ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕೆಲವು ವರದಿಗಳು ಹೇಳಿದ್ದವು. ಅಲ್ಲದೆ ಮಗ ಅಭಿಷೇಕ್ ಬಚ್ಚನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ತಲ್ಲಣ ಸೃಷ್ಟಿಸಿತ್ತು.
ಆದರೆ, ಈ ಎಲ್ಲಾ ಆತಂಕದ ಸುದ್ದಿಗಳ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಆಸ್ಪತ್ರೆಯ ಆಪ್ತ ಮೂಲಗಳು ತಿಳಿಸಿರುವಂತೆ, ‘ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಪ್ರತಿ ತಿಂಗಳು ಹೋಗುವಂತೆ ಶನಿವಾರದಂದು ನಾನಾವತಿ ಆಸ್ಪತ್ರೆಗೆ ಸಾಮಾನ್ಯ ಹೆಲ್ತ್ ಚೆಕಪ್‌ಗಾಗಿ ಹೋಗಿದ್ದರು. ತಪಾಸಣೆ ಮುಗಿದ ತಕ್ಷಣವೇ ಅವರು ಮನೆಗೆ ಮರಳಿದ್ದಾರೆ’ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಮರುದಿನವೇ ಅಮಿತಾಭ್ ಬಚ್ಚನ್ ಅವರು ತಮ್ಮ ನಿವಾಸ ಜಲ್ಸಾದಿಂದ ತಮ್ಮ ಕಚೇರಿಗೆ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿರುವುದನ್ನು ಜನರು ನೋಡಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಬಚ್ಚನ್ ಕುಟುಂಬದ ಆಪ್ತರು ಖಚಿತಪಡಿಸಿದೆ.
ಆಸ್ಪತ್ರೆ ಸುದ್ದಿಯ ನಡುವೆಯೇ ಬುಧವಾರ ಮುಂಜಾನೆ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿರುವ ಸಾಲುಗಳು ಸಖತ್ ವೈರಲ್ ಆಗುತ್ತಿವೆ. ಅವರು ಹಿಂದಿಯಲ್ಲಿ, ‘ಹದ್ದುಗಳು ಶಾಂತವಾದಾಗ ಗಿಳಿಗಳು ಮಾತನಾಡಲು ಶುರು ಮಾಡುತ್ತವೆ… ನಾನು ರೊಟ್ಟಿ ಹಾಗೂ ಸೊಪ್ಪಿನ ಪಲ್ಯ ತಿಂದೆ. ಅಷ್ಟರಲ್ಲೇ ಕಾಗೆಗಳು ಕೂಗಲು ಆರಂಭಿಸಿದವು’ ಎಂದು ಬರೆದುಕೊಂಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಅವರು ಈ ರೀತಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್; ಫೋಟೋ ಹಂಚಿಕೊಂಡ ಅಮಿತಾಭ್
ಅಮಿತಾಭ್ ಬಚ್ಚನ್ ಅವರು ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಕಮಲ್ ಹಾಸನ್ ಅವರೊಂದಿಗಿನ ಶೂಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದರು. ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ ಬಿಗ್ ಬಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ನಿರಾಳರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





