ಸಲ್ಮಾನ್ ಖಾನ್ ನಟನೆಯ ‘ಮೈನೆ ಪ್ಯಾರ್ ಕಿಯಾ’ ಸಿನಿಮಾ ಮೂಲಕ ಮನೆಮಾತಾದವರು ನಟಿ ಭಾಗ್ಯಶ್ರೀ. ಅದು ಅವರ ಚೊಚ್ಚಲ ಸಿನಿಮಾ ಆಗಿತ್ತು. ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. 1997ರಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಶಿವರಾಜ್ಕುಮಾರ್ (Shivarajkumar) ನಟನೆಯ ‘ಅಮ್ಮಾವ್ರ ಗಂಡ’ (Ammavra Ganda) ಚಿತ್ರಕ್ಕೆ ಭಾಗ್ಯಶ್ರೀ (Bhagyashree) ನಾಯಕಿಯಾಗಿ ಆಯ್ಕೆ ಆದರು. ಆ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರಾದರು. ಇಂಥ ಹಿಟ್ ಸಿನಿಮಾಗಳನ್ನು ನೀಡಿದರೂ ಕೂಡ ಚಿತ್ರರಂಗದಲ್ಲಿ ಭಾಗ್ಯಶ್ರೀ ಹೆಚ್ಚು ಕಾಲ ಸಕ್ರಿಯವಾಗಿರಲಿಲ್ಲ. ಬಹುಬೇಡಿಕೆ ಇರುವಾಗಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿಬಿಟ್ಟರು. ಈಗ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ (Avantika Dasani) ಸಹ ಬಣ್ಣದ ಲೋಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರ ರಂಗಪ್ರವೇಶಕ್ಕೆ ಸಕಲ ಸಿದ್ಧತೆ ನಡೆದಿದೆ.
ಭಾಗ್ಯಶ್ರೀ ಅವರಿಗೆ ಇಬ್ಬರು ಮಕ್ಕಳು. ಪುತ್ರ ಅಭಿಮನ್ಯು ಈಗಾಗಲೇ ನಟನೆ ಆರಂಭಿಸಿದ್ದಾರೆ. ಅಭಿಮನ್ಯು ನಟಿಸಿದ್ದ ‘ಮರ್ದ್ ಕೋ ದರ್ದ್ ನಹೀ ಹೋತಾ’ ಸಿನಿಮಾ 2019ರಲ್ಲಿ ಬಿಡುಗಡೆ ಆಯಿತು. ಆ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ಈಗ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ಕೂಡ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ. ಟಾಲಿವುಡ್ ಮೂಲಕ ಅವರು ಬಣ್ಣದ ಬದುಕು ಆರಂಭಿಸಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅವಂತಿಕಾ ತುಂಬ ಫೇಮಸ್ ಆಗಿದ್ದಾರೆ. ತೆಲುಗು ನಟ ಬೆಲ್ಲಂಕೊಂಡ ಗಣೇಶ್ ನಟನೆಯ ಹೊಸ ಸಿನಿಮಾಗೆ ಹೀರೋಯಿನ್ ಆಗಲು ಅವಂತಿಕಾ ಒಪ್ಪಿಕೊಂಡಿದ್ದಾರೆ. ತಾಯಿಯ ರೀತಿಯೇ ಅವರು ಚಿತ್ರರಂಗದಲ್ಲಿ ಮಿಂಚುತ್ತಾರೋ ಇಲ್ಲವೋ ಎಂಬ ಕುತೂಹಲ ಅವರ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅವಂತಿಕಾ ಮತ್ತು ಬೆಲ್ಲಂಕೊಂಡ ಗಣೇಶ್ ಜೊತೆಯಾಗಿ ನಟಿಸಲಿರುವ ಚಿತ್ರಕ್ಕೆ ರಾಕೇಶ್ ಉಪ್ಪಲಪಾಟಿ ನಿರ್ದೇಶನ ಮಾಡಲಿದ್ದಾರೆ. ಮಹತಿ ಸಾಗರ್ ಸಂಗೀತ ಸಂಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ ಬಳಿಕ ಭಾಗ್ಯಶ್ರೀ ಅವರು ಕನ್ನಡದ ಬೇರಾವುದೇ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಲಿಲ್ಲ. 2019ರಲ್ಲಿ ಬಂದ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಿಖಿಲ್ ಕುಮಾರ್ಗೆ ತಾಯಿಯಾಗಿ ಅವರು ನಟಿಸಿದರು. ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಚಿತ್ರದಲ್ಲೂ ಭಾಗ್ಯಶ್ರೀ ಅವರು ತಾಯಿ ಪಾತ್ರ ಮಾಡಿದ್ದಾರೆ. ಆ ಚಿತ್ರ 2022ರ ಜ.14ರಂದು ತೆರೆಕಾಣಲಿದೆ.
ಇದನ್ನೂ ಓದಿ:
Premam Poojyam: ಚಳಿ, ಮಳೆಯನ್ನೂ ಲೆಕ್ಕಿಸದೇ ‘ಪ್ರೇಮಂ ಪೂಜ್ಯಂ’ ಸಿನಿಮಾ ನೋಡಲು ಬಂದ ಪ್ರೇಕ್ಷಕರು
‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು