‘ಹರಿ ಹರ ವೀರ ಮಲ್ಲು’ ವಿರುದ್ಧ ಆಂಧ್ರ ಪ್ರತಿ ಪಕ್ಷಗಳ ವಾಗ್ದಾಳಿ
Pawan Kalyan: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಹಲವಾರು ಅಡೆ-ತಡೆಗಳ ಬಳಿಕ ಜೂನ್ 12 ರಂದು ಬಿಡುಗಡೆ ಆಗಲಿದೆ. ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಕಾರಣವಾಗಿರಿಸಿಕೊಂಡು ಆಂಧ್ರ ವಿಪಕ್ಷದ ಕೆಲ ನಾಯಕರು ಪವನ್ ಕಲ್ಯಾಣ್ ಹಾಗೂ ‘ಹರಿ ಹರ ವೀರ ಮಲ್ಲು’ ಸಿನಿಮಾದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿನಿಮಾ ಫ್ಲಾಪ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಹಲವು ಅಡೆ ತಡೆಗಳ ಬಳಿಕ ಕೊನೆಗೂ ಬಿಡುಗಡೆ ಆಗುತ್ತಿದೆ. ಸಿನಿಮಾ ಜೂನ್ 12 ರಂದು ತೆರೆಗೆ ಬರಲಿದೆ. ಸಿನಿಮಾ ಸುಮಾರು ಐದು ವರ್ಷಗಳ ಕಾಲ ಚಿತ್ರೀಕರಣಗೊಂಡಿದೆ. ಹಲವು ಅಡೆ-ತಡೆಗಳನ್ನು ದಾಟಿ ಬಿಡುಗಡೆ ಹೊಸ್ತಿಲಿಗೆ ಬಂದು ನಿಂತಿದೆ. ಇದೀಗ ಸಿನಿಮಾ ವಿರುದ್ಧ ಹಾಗೂ ಪವನ್ ಕಲ್ಯಾಣ್ ವಿರುದ್ಧ ಪ್ರತಿ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.
ವೈಸಿಆರ್ಸಿಪಿಯ ಕೆಲ ಮುಖಂಡರು ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಕಾರಣವಾಗಿ ಇರಿಸಿಕೊಂಡು ಪವನ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪವನ್ ಕಲ್ಯಾಣ್ ತನ್ನ ರಾಜಕೀಯ ಲಾಭಕ್ಕಾಗಿ ಸಿನಿಮಾ ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವೈಸಿಆರ್ಸಿಪಿ ಮುಖಂಡ, ಮಾಜಿ ಸಚಿವ ಪೆರ್ನಿ ನಾನಿ ಆರೋಪಿಸಿದ್ದಾರೆ. ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರ ಹಣವನ್ನು ಸಹ ಹಾಳು ಮಾಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಚಿತ್ರಮಂದಿರಗಳ ಮಾಲೀಕರ ಮೇಲೆ ಒತ್ತಡ ಹೇರಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಸಿನಿಮಾಗಳ ಮೇಲೆ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲ ಎಂದು ಈ ಹಿಂದೆ ಪವನ್ ಕಲ್ಯಾಣ್ ಆರೋಪ ಮಾಡಿದ್ದರು. ಆದರೆ ಈಗ ಅವರೇ ಸಿನಿಮಾಗಳ ವ್ಯವಹಾರದಲ್ಲಿ ಮೂಗು ತೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಮಾಲೀಕರ ಸಂಕಷ್ಟವನ್ನು ಅವರ ಬೇಡಿಕೆಯನ್ನು ಪವನ್ ಕಲ್ಯಾಣ್ ಪರಿಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ, ‘ಹರಿ ಹರ ವೀರ ಮಲ್ಲು’ ಸಿನಿಮಾ ಅಟ್ಟರ್ ಫ್ಲಾಪ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮತ್ತೊಬ್ಬ ಮಾಜಿ ಮಂತ್ರಿ ಅಂಬಾಟಿ ರಾಮ್ಬಾಬು ಸಹ ಸಿನಿಮಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ:ಯೂಟ್ಯೂಬರ್ ಬಂಧನ, ಬೆಂಬಲಕ್ಕೆ ಬಂದ ಪವನ್ ಕಲ್ಯಾಣ್, ಕಂಗನಾ
‘ಹರಿ ಹರ ವೀರ ಮಲ್ಲು’ ಸಿನಿಮಾ ಮೊಘಲ್ ದೊರೆಯ ವಿರುದ್ಧ ಹೋರಾಡಿದ ವ್ಯಕ್ತಿಯ ಕತೆಯಾಗಿದ್ದು, ಸಿನಿಮಾದ ಮೊದಲ ಕೆಲ ಭಾಗವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಆದರೆ ಅವರು ಸಿನಿಮಾ ಬಿಟ್ಟು ಹೊರನಡೆದು ಆ ಬಳಿಕ ಮತ್ತೊಬ್ಬ ನಿರ್ದೇಶಕ ಸಿನಿಮಾ ಪೂರ್ತಿ ಮಾಡಿದ್ದಾರೆ. ಸಿನಿಮಾ ಐದು ವರ್ಷದ ಹಿಂದೆ ಪ್ರಾರಂಭವಾಗಿದ್ದು, ಪವನ್ ಕಲ್ಯಾಣ್ ಅವರ ಚುನಾವಣೆ ಪ್ರಚಾರ ಆ ಬಳಿಕ ಅವರು ಉಪ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಬ್ಯುಸಿ ಆದ ಕಾರಣ ಚಿತ್ರೀಕರಣ ನೆನೆಗುದಿಗೆ ಬಿದ್ದು ಅಂತಿಮವಾಗಿ ಜೂನ್ 12 ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಜೂನ್ 8 ರಂದು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




