ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar) ಅಭಿನಯದ 125ನೇ ಚಿತ್ರ ವೇದಾ (Vedha Movie) ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಈ ಚಿತ್ರದ ಕಾರ್ಯಕ್ರಮದಲ್ಲಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಕಾಣಿಸಿಕೊಂಡಿದ್ದರು. ಅಣ್ಣಾವ್ರ ಕುಟುಂಬದ ಆಪ್ತರಲ್ಲಿ ಒಬ್ಬರಾಗಿರುವ ಕುಂಬ್ಳೆ ಅವರನ್ನು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಂಬ್ಳೆ, ಶಿವಣ್ಣ ನನಗೆ ಗೀತಾ ಪಿಕ್ಚರ್ಸ್ ಲಾಂಚ್ ಆಗುತ್ತಿದೆ ಎಂದು ಕರೆದಿದ್ದರು. ಆದರೆ ಇದೇ ವೇಳೆ ದುರಾದೃಷ್ಟವಶಾತ್ ಅಪ್ಪು ನಮ್ಮನ್ನು ಅಗಲಿದರು. ಅಂದು ಶಿವಣ್ಣ ಕರೆ ಮಾಡಿದಾಗ ಪುನೀತ್ ರಾಜ್ ಕುಮಾರ್ ಕೂಡ ಇದ್ದರು. ಈಗ ಅವರು ಅಗಲಿದರೂ ನಮ್ಮ ಜೊತೆಯೇ ಇದ್ದಾರೆ ಎಂದು ಅನಿಲ್ ಕುಂಬ್ಳೆ ಭಾವುಕರಾದರು.
ಡಾ ರಾಜ್ ಕುಮಾರ್ ಅವರ ಕುಟುಂಬದ ಎಲ್ಲಾ ಸದಸ್ಯರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರೆಲ್ಲರಿಗೂ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ. ಅದರಲ್ಲೂ ಕರ್ನಾಟಕದ ಆಟಗಾರರ ಮೇಲೆ ತುಂಬಾ ವಾತ್ಸಲ್ಯ ತೋರಿಸುತ್ತಾರೆ. ಬೆಂಗಳೂರಿನಲ್ಲಿ ಮ್ಯಾಚ್ ಆಗುವಾಗ ಅಪ್ಪು, ಶಿವಣ್ಣ ಎಲ್ಲರೂ ಬರುತ್ತಿದ್ದರು. ನಾನು ಕೂಡ ಜಾವಗಲ್ ಶ್ರೀನಾಥ್ ಅವರೊಂದಿಗೆ ಡಾ ರಾಜ್ ಕುಮಾರ್ ಅವರನ್ನು ನೋಡಲು ಹೋಗಿದ್ವಿ. ಅಂದು ಫೋನ್ ಏನು ಇರಲಿಲ್ಲ. ಜಸ್ಟ್ ಮನೆಗೆ ಹೋಗಿ ನಾವು ಬಂದ್ವಿ ಎಂದಷ್ಟೇ ತಿಳಿಸಿದ್ದೆವು. ಅವರು ಆಗ ನಮ್ಮನ್ನು ತುಂಬಾ ಗೌರವದೊಂದಿಗೆ ಬರ ಮಾಡಿಕೊಂಡಿದ್ದರು ಎಂದು ಇದೇ ವೇಳೆ ಕುಂಬ್ಳೆ ಸ್ಮರಿಸಿದರು.
ಇದೇ ವೇಳೆ ನಾನು ಅನಂತ್ ನಾಗ್ ಅವರ ಅಭಿಮಾನಿ, ಇದೀಗ ಅವರು ಕೂಡ ಈ ಕಾರ್ಯಕ್ರಮದಲ್ಲಿದ್ದಾರೆ. ಹೀಗಾಗಿ ನಾನು ಸಹ ಫ್ಯಾನ್ ಬಾಯ್ ಆಗಿ ಇಲ್ಲಿ ನಿಂತಿದ್ದೇನೆ ಎಂದು ಅನಿಲ್ ಕುಂಬ್ಳೆ ತಿಳಿಸಿದರು. ಅಷ್ಟೇ ಅಲ್ಲದೆ ಅನಂತ್ ನಾಗ್ ಅವರ ಸಹಜ ಅಭಿನಯವನ್ನು ಕೊಂಡಾಡಿದರು. ಇನ್ನು ಶಿವಣ್ಣ ಅವರನ್ನು ಟೆಸ್ಟ್ ಪ್ಲೇಯರ್ಗೆ ಹೋಲಿಸಿದ ಕುಂಬ್ಳೆ, ನೀವು ಎವರ್ಗ್ರೀನ್ ನಟ 125 ಚಿತ್ರವಾದರೂ ಇನ್ನು ಮುಂದುವರೆಯಲಿ ಎಂದು ಹರಸಿದರು.
ಇನ್ನು ವೇದಾ ಚಿತ್ರವು 1960ರ ದಶಕದಲ್ಲಿ ನಡೆಯುವ ಕಥೆಹಂದರ ಹೊಂದಿದೆ. ಮೋಷನ್ ಪೋಸ್ಟರ್ ಅನ್ನು ಕಿಚ್ಚಿನ ನಡುವೆ ರೂಪಿಸಲಾಗಿದ್ದು, ಇದಾಗ್ಯೂ ಚಿತ್ರಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಹಾಗೆಯೇ ಚಿತ್ರದ ಮೂಲಕ ಶಿವರಾಜ್ ಕುಮಾರ್ ಸ್ಯಾಂಡಲ್ವುಡ್ಗೆ ನಿರ್ಮಾಪಕರಾಗಿ ಕಾಲಿಡುತ್ತಿದ್ದಾರೆ. ವೇದ ಚಿತ್ರವನ್ನು ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಭಜರಂಗಿ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.