ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನ ಮಾಡುವ ಸಿನಿಮಾಗಳ ಬಗ್ಗೆ ಸಿಕ್ಕಾಪಟ್ಟೆ ಟೀಕೆ ಎದುರಾಗುತ್ತದೆ ಎಂಬುದು ನಿಜ. ಹಾಗಿದ್ದರೂ ಕೂಡ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಗುತ್ತವೆ. ಟಾಲಿವುಡ್ನ ‘ಅರ್ಜುನ್ ರೆಡ್ಡಿ’, ಬಾಲಿವುಡ್ನ ‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ (Animal) ಸಿನಿಮಾಗಳೇ ಈ ಮಾತಿಗೆ ಸಾಕ್ಷಿ. ಈಗ ಸಂದೀಪ್ ರೆಡ್ಡಿ ವಂಗಾ ಅವರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಿಶೇಷ ಏನೆಂದರೆ, ಮೈಕಲ್ ಜಾಕ್ಸನ್ ಬಯೋಪಿಕ್ಗೆ (Michael Jackson Biopic) ನಿರ್ದೇಶನ ಮಾಡಬೇಕು ಎಂಬ ಆಸೆ ಸಂದೀಪ್ ರೆಡ್ಡಿ ವಂಗಾ ಅವರಿಗೆ ಇದೆ.
ಮೂರು ಸಿನಿಮಾಗಳು ಸೂಪರ್ ಹಿಟ್ ಆದ ಬಳಿಕ ಸಂದೀಪ್ ರೆಡ್ಡಿ ವಂಗಾ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದ್ದು, ಅವರ ಜೊತೆ ಸಿನಿಮಾ ಮಾಡಲು ಅನೇಕ ಸ್ಟಾರ್ ನಟರು ಕಾದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರು ಒಂದು ಬಯಕೆಯನ್ನು ತೋಡಿಕೊಂಡಿದ್ದಾರೆ. ಮೈಕಲ್ ಜಾಕ್ಸನ್ ಅವರ ಜೀವನದ ಕಥೆ ಬಗ್ಗೆ ಸಂದೀಪ್ ಅವರಿಗೆ ಸಖತ್ ಆಸಕ್ತಿ ಇದೆ.
‘ಆಸೆ ಇದೆ. ಆದರೆ, ಮೈಕಲ್ ಜಾಕ್ಸನ್ ಪಾತ್ರವನ್ನು ಯಾರು ಮಾಡ್ತಾರೆ ಎಂಬುದೇ ಪ್ರಶ್ನೆ. ಸೂಕ್ತವಾದ ನಟ ಸಿಕ್ಕರೆ ಹಾಲಿವುಡ್ನಲ್ಲಿ ಸಿನಿಮಾ ಮಾಡಬಹುದು. ಮೈಕಲ್ ಜಾಕ್ಸನ್ ಅವರ ಜೀವನ ತುಂಬ ಇಂಟರೆಸ್ಟಿಂಗ್ ಆಗಿತ್ತು. ಅವರ ಬಾಲ್ಯದ ದಿನಗಳು, ಮೈ ಬಣ್ಣ ಬದಲಾಯಿಸಿಕೊಂಡಿದ್ದು.. ಅದೆಲ್ಲವೂ ಒಂದು ದೊಡ್ಡ ಜರ್ನಿ, ದೊಡ್ಡ ಕಥೆ. ಅದೊಂದು ಕನಸು. ಆ ಸಿನಿಮಾ ಮಾಡಿದರೆ ಎಲ್ಲರೂ ಟಿಕೆಟ್ ಖರೀದಿಸುತ್ತಾರೆ. ಯಾರೇ ನಿರ್ದೇಶನ ಮಾಡಿದರೂ ನಾನು ಟಿಕೆಟ್ ಖರೀಸಿದಿ ಸಿನಿಮಾ ನೋಡುತ್ತೇನೆ. ಯಾಕೆಂದ್ರೆ ನಾನು ಕೂಡ ತಿಳಿದುಕೊಳ್ಳಬೇಕು’ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.
ಇದನ್ನೂ ಓದಿ: ಮೊದಲ ದಿನವೇ ‘ಸ್ಪಿರಿಟ್’ ಚಿತ್ರ 150 ಕೋಟಿ ರೂ. ಗಳಿಸುತ್ತೆ ಎಂದ ಸಂದೀಪ್ ರೆಡ್ಡಿ ವಂಗಾ
ಪ್ರಭಾಸ್ ಅವರು ಈಗ ‘ಕಲ್ಕಿ 2898 ಎಡಿ’, ‘ರಾಜಾ ಸಾಬ್’ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಂತರ ಅವರು ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಆ ಸಿನಿಮಾ ಮೊದಲ ದಿನವೇ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಸಂದೀಪ್ ಅವರು ಈಗಲೇ ಭವಿಷ್ಯ ನುಡಿದಿದ್ದಾರೆ. ‘ಸ್ಪಿರಿಟ್’ ಸಿನಿಮಾ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.