ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ಮದುವೆ ಹಾಗೂ ಚೆನ್ನೈ ರಿಸೆಪ್ಷನ್ ಆಹ್ವಾನ ಪತ್ರಿಕೆ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಗ್ರೀಸ್‌ನಲ್ಲಿ ನಡೆಯಲಿರುವ ಈ ವಿವಾಹ ಮಹೋತ್ಸವಕ್ಕಾಗಿ ಜೋಡಿಯು ನೀಲಿ ಮತ್ತು ಬಿಳಿ ಬಣ್ಣದ ಥೀಮ್ ಅನ್ನು ಆಯ್ಕೆ ಮಾಡಿದೆ.

ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ
ರವಿಚಂದರ್, ಅನಿರುದ್ಧ್
Edited By:

Updated on: Oct 29, 2026 | 7:56 AM

ಮುಖ್ಯಾಂಶಗಳು

  • ಆಹ್ವಾನ ಪತ್ರಿಕೆಯ ವಿಶೇಷತೆ
  • ನೀಲಿ ಹಾಗೂ ಬಿಳಿ ಬಣ್ಣದ ವಿಶಿಷ್ಟ ಥೀಮ್ ಆಯ್ಕೆ
  • ಗ್ರೀಸ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್

ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಐಪಿಎಲ್‌ನ ‘ಸನ್‌ರೈಸರ್ಸ್ ಹೈದರಾಬಾದ್’ ತಂಡದ ಸಿಇಒ ಕಾವ್ಯಾ ಮಾರನ್ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಜೋಡಿಯ ಮದುವೆಗೆ ಸಂಬಂಧಿಸಿದಂತೆ ಸ್ವತಃ ಅನಿರುದ್ಧ್ ಅಥವಾ ಕಾವ್ಯಾ ಕುಟುಂಬ ಪ್ರಕಟಣೆ ನೀಡದಿದ್ದರೂ, ಅವರ ಚೆನ್ನೈ ರಿಸೆಪ್ಷನ್ ಆಹ್ವಾನ ಪತ್ರಿಕೆ ಹಾಗೂ ಮದುವೆ ಸಿದ್ಧತೆಗಳು ಇದೀಗ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

ಮದುವೆ ಆಹ್ವಾನ ಪತ್ರಿಕೆಯ ವಿಶೇಷತೆ ಏನು?

ಮದುವೆಯ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಡಿಸೈನರ್ ರಂಜಿನಿ ಅಯ್ಯಂಗಾರ್ ಅವರು ‘ಮಿಡ್-ಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಹ್ವಾನ ಪತ್ರಿಕೆಯ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ. ‘ಅನಿರುದ್ಧ್ ಮತ್ತು ಕಾವ್ಯಾ ತಮ್ಮ ಅತಿಥಿಗಳಿಗೆ ಕೊಡುವ ಗಿಫ್ಟ್ ಬಾಕ್ಸ್ ತುಂಬಾ ಸರಳವಾಗಿ, ಗೌರವಯುತವಾಗಿ ಮತ್ತು ಅವರು ಅದನ್ನು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತಿರಬೇಕು ಎಂದು ಬಯಸಿದ್ದರು. ಹಾಗಾಗಿ 3D ಎಲಿಮೆಂಟ್ಸ್ ಇರುವ ವಿಶೇಷ ಮರದ ಬಾಕ್ಸ್ ವಿನ್ಯಾಸಗೊಳಿಸಿದೆವು’ ಎಂದು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಹಲವು ಬಣ್ಣಗಳನ್ನು ಪರಿಶೀಲಿಸಿದರೂ, ಅಂತಿಮವಾಗಿ ಇಬ್ಬರಿಗೂ ‘ನೀಲಿ ಮತ್ತು ಬಿಳಿ’ ಬಣ್ಣಗಳ ಸಂಯೋಜನೆ ಇಷ್ಟವಾಯಿತು. ವಿಶೇಷವೆಂದರೆ, ನಂತರ ಈ ಬಣ್ಣದ ಥೀಮ್ ಮದುವೆ ನಡೆಯಲಿರುವ ‘ಗ್ರೀಸ್’ ದೇಶದ ಥೀಮ್​ಗೂ ಪರ್ಫೆಕ್ಟ್ ಆಗಿ ಹೊಂದುಕೊಂಡಿತು’ ಎಂದು ವಿನ್ಯಾಸಕಿ ತಿಳಿಸಿದ್ದಾರೆ.

ವಿನ್ಯಾಸಕಿ ರಂಜಿನಿ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯಾ ದಿನಕ್ಕೆ 3-4 ಬಾರಿ ಕರೆ ಮಾಡಿ ಪ್ರತಿಯೊಂದು ಸಣ್ಣ ವಿಷಯವನ್ನೂ ಗಮನಿಸುತ್ತಿದ್ದರಂತೆ. ಇಬ್ಬರೂ ಸೃಜನಶೀಲರಾಗಿದ್ದರಿಂದ ತಮಗೆ ಏನು ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಮೊದಲ ಡ್ರಾಫ್ಟ್ ಸರಿಬಾರದೆ ಹೋದಾಗ ಮತ್ತು ಪ್ರೊಡಕ್ಷನ್ ಸವಾಲುಗಳು ಎದುರಾದಾಗ ತಮಗೆ ಕಷ್ಟವಾಯಿತಾದರೂ, ಅಂತಿಮವಾಗಿ ಬಂದಿರುವ ಔಟ್‌ಪುಟ್ ಅತ್ಯಂತ ಅದ್ಭುತವಾಗಿದೆ ಎಂದು ವಿನ್ಯಾಸಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರೀಸ್‌ನಲ್ಲಿ ಮದುವೆ, ಚೆನ್ನೈನಲ್ಲಿ ಅದ್ಧೂರಿ ರಿಸೆಪ್ಷನ್

ಡೆಸ್ಟಿನೇಶನ್ ವೆಡ್ಡಿಂಗ್: ನವೆಂಬರ್ 10 ಮತ್ತು 11ರಂದು ಗ್ರೀಸ್‌ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಲಿದೆ. ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ದೂರಿ ರಿಸೆಪ್ಷನ್ ಆಯೋಜಿಸಲಾಗಿದೆ. ಸನ್‌ ಗ್ರೂಪ್ ಮಾಲೀಕ ಕಳಾನಿಧಿ ಮಾರನ್ ಹಾಗೂ ಕಾವೇರಿ ಮಾರನ್ ಅವರು ಈಗಾಗಲೇ ದೇಶದ ಪ್ರಮುಖ ರಾಜಕಾರಣಿಗಳಿಗೆ ಸ್ವತಃ ತೆರಳಿ ಆಹ್ವಾನ ನೀಡುತ್ತಿದ್ದಾರೆ.

ಸ್ಟಾರ್ ಅತಿಥಿಗಳ ದಂಡು: ಯಾರಿಗೆಲ್ಲ ಆಹ್ವಾನ?

ಅನಿರುದ್ಧ್ ಅವರ ಸಂಬಂಧಿ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ಶಿವಕಾರ್ತಿಕೇಯನ್, ಅಜಿತ್ ಕುಮಾರ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಹಲವು ದಿಗ್ಗಜರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಸಿಎಂ ‘ದಳಪತಿ’ ವಿಜಯ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೂ ಆಹ್ವಾನ ಪತ್ರಿಕೆ ನೀಡಲಾಗಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಆಗಿರುವ ಕಾವ್ಯಾ ಮಾರನ್ ಅವರ ರಿಸೆಪ್ಷನ್‌ನಲ್ಲಿ ಪ್ರಸಿದ್ಧ ಕ್ರಿಕೆಟಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಖ್ಯಾತ ಜೋಡಿಯ ಕಿರು ಪರಿಚಯ

ಅನಿರುದ್ಧ್ ರವಿಚಂದರ್: ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು, ಇಂದು ದಕ್ಷಿಣ ಭಾರತದ ಅತಿ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಇತ್ತೀಚೆಗೆ ‘ಜೈಲರ್ 2’ ಸೇರಿದಂತೆ ಶಾರೂಖ್ ಖಾನ್, ಪವನ್ ಕಲ್ಯಾಣ್ ಹಾಗೂ ವಿಜಯ್ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಅನಿರುದ್ಧ್​-​ಕಾವ್ಯಾ ಮಾರನ್​ ಮದುವೆ: ಸಿಎಂ ಡಿಕೆ ಶಿವಕುಮಾರ್‌ಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!

ಕಾವ್ಯಾ ಮಾರನ್: ಯುಕೆ ಯ ವಾರ್ವಿಕ್ ಬಿಸಿನೆಸ್ ಸ್ಕೂಲ್‌ನಲ್ಲಿ ಎಂ‌ಬಿಎ ಮುಗಿಸಿರುವ ಕಾವ್ಯಾ, 2019 ರಲ್ಲಿ ಸನ್ ಟಿವಿ ನೆಟ್‌ವರ್ಕ್‌ಗೆ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ಸೇರ್ಪಡೆಯಾದರು. ಪ್ರಸ್ತುತ ಸನ್ ಟಿವಿ ನಿರ್ದೇಶಕಿಯಾಗಿ ಹಾಗೂ ಐಪಿಎಲ್‌ನ ‘ಸನ್‌ರೈಸರ್ಸ್ ಹೈದರಾಬಾದ್’ ತಂಡದ ಯಶಸ್ವಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us