ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜತೆ ನಂಟು; ಅನಿರುದ್ಧ್ ರವಿಚಂದರ್ ವಿರುದ್ಧ ಜನಾಕ್ರೋಶ

ಇತ್ತೀಚೆಗೆ ಬಿಡುಗಡೆಯಾದ ಹೊಸ ಹಾಡಿನ ಕ್ರೆಡಿಟ್ಸ್‌ನಲ್ಲಿ ಜಾನಿ ಮಾಸ್ಟರ್ ಹೆಸರನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಕ್ಸೋ ಕೇಸ್​ ರೀತಿಯ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಅನಿರುದ್ಧ್ ರವಿಚಂದರ್ ಅವರು ಕೆಲಸದ ಅವಕಾಶ ನೀಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.

ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜತೆ ನಂಟು; ಅನಿರುದ್ಧ್ ರವಿಚಂದರ್ ವಿರುದ್ಧ ಜನಾಕ್ರೋಶ
Jani Master, Anirudh Ravichander

Updated on: Jun 15, 2026 | 3:41 PM

ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಅನಿರುದ್ಧ್ ರವಿಚಂದರ್ (Anirudh Ravichander) ಅವರು ತಮ್ಮ ಹೊಸ ಸ್ವತಂತ್ರ ಆಲ್ಬಂ ಸಾಂಗ್ ‘ಅರವಿಂದ್’ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಬಂಧನಕ್ಕೊಳಗಾಗಿ, ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (Jani Master) ಅವರೊಂದಿಗೆ ಅನಿರುದ್ಧ್ ಕೈಜೋಡಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.

‘ಅರವಿಂದ್’ ಹಾಡು ಅನಿರುದ್ಧ್ ರವಿಚಂದರ್ ಅವರ ಸ್ವಂತ ಮ್ಯೂಸಿಕ್ ಲೇಬಲ್ ಆದ ‘ಆಲ್ಬುಕರ್ಕ್ ರೆಕಾರ್ಡ್ಸ್’ ಮತ್ತು ‘ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ’ ಪಾಲುದಾರಿಕೆಯಲ್ಲಿ ಬಿಡುಗಡೆಯಾದ ಮೊದಲ ಪಾಪ್ ಹಾಡಾಗಿದೆ. 2023ರ ಸೂಪರ್ ಹಿಟ್ ‘ಜೈಲರ್’ ಚಿತ್ರದ ‘ಹುಕುಂ’ ಹಾಡಿನ ಖ್ಯಾತಿಯ ಸಾಹಿತಿ ಸೂಪರ್ ಸುಬು ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ.

ಚಿತ್ರರಂಗದಲ್ಲಿ ಇಷ್ಟೊಂದು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರೂ ಸಹ, ಪ್ರಭಾವಿ ವ್ಯಕ್ತಿಗಳು ಯಾವುದೇ ವೃತ್ತಿಪರ ಪರಿಣಾಮಗಳನ್ನು ಎದುರಿಸದೇ ದೊಡ್ಡ ಪ್ರಾಜೆಕ್ಟ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಪ್ರವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ‘ಇದು ರೀಲ್ಸ್ ಮಾಡಲು ಸಿದ್ಧಪಡಿಸಿದ ಕೇವಲ ಸಾಧಾರಣ ಹಾಡು. ಇಂತಹ ಹಾಡಿಗೆ ಪೋಕ್ಸೋ ಆರೋಪಿ ಜಾನಿಗೆ ಅವಕಾಶ ನೀಡುವ ಮೂಲಕ ಅವನನ್ನು ಬೆಂಬಲಿಸಿರುವುದು ನಿಜಕ್ಕೂ ಅಸಹ್ಯಕರ ಮತ್ತು ನಾಚಿಕೆಗೇಡು’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಪೋಕ್ಸೋ ಆರೋಪಿ ಜಾನಿ ನೃತ್ಯ ನಿರ್ದೇಶನ ಮಾಡಿರುವ ಹಾಡೇ? ನಾನು ಈ ಹಾಡನ್ನು ಎಂದಿಗೂ ಕೇಳುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಅನಿರುದ್ಧ್ ಕಡೆಯಿಂದ ಇಂತಹ ಕೆಟ್ಟ ನಿರ್ಧಾರ ನಿರೀಕ್ಷಿಸಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ‘ಇದು ನಿಮ್ಮದೇ ಸ್ವಂತ ಲೇಬಲ್ ಆಗಿರುವುದರಿಂದ ಯಾರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಂಪೂರ್ಣ ಹಕ್ಕು ನಿಮ್ಮದೇ ಆಗಿತ್ತು. ಹೀಗಿರುವಾಗ ಪೋಕ್ಸೋ ಆರೋಪಿಗೆ ಕೆಲಸ ನೀಡುವ ಅಗತ್ಯವಿರಲಿಲ್ಲ. ಅನಿರುದ್ಧ್ ಅವರಿಂದ ಇದು ತೀವ್ರ ನಿರಾಶೆ ಉಂಟುಮಾಡಿದೆ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಕಾಯ್ದೆ ಅಡಿ ಕೇಸ್ ಹಿನ್ನೆಲೆ; ಜಾನಿ ಮಾಸ್ಟರ್​ಗೆ ಘೋಷಿಸಿದ್ದ ರಾಷ್ಟ್ರಪ್ರಶಸ್ತಿ ರದ್ದು  

ಜಾನಿ ಮಾಸ್ಟರ್ ಅವರನ್ನು ದೊಡ್ಡ ಪ್ರಾಜೆಕ್ಟ್‌ಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕಿರಿ ಚಿಕಿರಿ’ ಮತ್ತು ‘ರೈ ರೈ ರಾ ರಾ’ ಹಾಡುಗಳಿಗೆ ಜಾನಿ ಮಾಸ್ಟರ್ ಅವರನ್ನು ನೃತ್ಯ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದಕ್ಕೂ ಚಿತ್ರರಂಗ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಪ್ರಕರಣದ ಹಿನ್ನೆಲೆ: 2020ರಲ್ಲಿ ಮುಂಬೈ ಪ್ರವಾಸದ ಸಂದರ್ಭದಲ್ಲಿ ಜಾನಿ ಮಾಸ್ಟರ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಮಾಜಿ ಮಹಿಳಾ ಸಹಾಯಕಿಯೊಬ್ಬರು ಆರೋಪಿಸಿದ್ದರು. ಅಲ್ಲದೆ ಈ ವಿಷಯವನ್ನು ಮುಚ್ಚಿಡಲು ಹಲವು ವರ್ಷಗಳಿಂದ ತಮಗೆ ಬೆದರಿಕೆ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದೂ ದೂರಿದ್ದರು. ಘಟನೆ ನಡೆದ ಸಂದರ್ಭದಲ್ಲಿ ದೂರುದಾರೆ ಅಪ್ರಾಪ್ತೆಯಾಗಿದ್ದರಿಂದ, ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us