
ಚಿತ್ರದ ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್ ಆದರೆ ಆ ಸಿನಿಮಾ ಅರ್ಧ ಗೆದ್ದಂತೆಯೇ ಸರಿ ಎಂಬುದು ಚಿತ್ರರಂಗದ ಮಂದಿಯ ಲೆಕ್ಕಾಚಾರ. ಅದಕ್ಕಾಗಿ ಪ್ರತಿ ಚಿತ್ರದ ಸಂಗೀತ ನಿರ್ದೇಶಕರು ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಈ ವಿಚಾರದಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಯಶಸ್ವಿ ಆಗಿದೆ. ಈ ಚಿತ್ರದ ‘ರಾ ರಾ ರಕ್ಕಮ್ಮ..’ (Ra Ra Rakkamma) ಹಾಡು ಸೂಪರ್ ಹಿಟ್ ಆಗಿದೆ. ಎಲ್ಲರ ಬಾಯಲ್ಲೂ ಈ ಗೀತೆ ಗುನುಗುತ್ತಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ. ಈ ಹಾಡು ಹಿಟ್ ಆಗಿರುವ ಬೆನ್ನಲ್ಲೇ ತೆಲುಗಿನಲ್ಲಿ ಬೇರೊಂದು ಸಿನಿಮಾದಿಂದ ‘ರಾ ರಾ ರೆಡ್ಡಿ..’ (Ra Ra Reddy) ಎಂಬ ಹಾಡು ಬಿಡುಗಡೆ ಆಗುತ್ತಿದೆ. ಇದೇನು ಕಾಕತಾಳೀಯವೋ ತಿಳಿದಿಲ್ಲ.
‘ರಾ ರಾ ರಕ್ಕಮ್ಮ’ ಮತ್ತು ‘ರಾ ರಾ ರೆಡ್ಡಿ’ ಹಾಡಿನ ಟೈಟಲ್ ನಡುವೆ ಸಾಮ್ಯತೆ ಇರುವುದರಿಂದ ಕೌತುಕ ಮೂಡಿದೆ. ನಿತಿನ್ ಹೀರೋ ಆಗಿ ನಟಿಸಿರುವ ‘ಮಾಚೆರ್ಲಾ ನಿಯೋಜಕವರ್ಗಂ’ ಸಿನಿಮಾದ ಹಾಡು ಇದು. ನಿತಿನ್ ಅಭಿಮಾನಿಗಳ ವಲಯದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ರಾ ರಾ ರೆಡ್ಡಿ..’ ಹಾಡು ಮೂಡಿಬಂದಿದೆ ಎಂಬುದರ ಝಲಕ್ ತೋರಿಸಲು ಈಗ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ನಿತಿನ್ ಜೊತೆ ಕೃತಿ ಶೆಟ್ಟಿ ಮತ್ತು ಕ್ಯಾಥರೀನ್ ತ್ರೆಸಾ ನಟಿಸುತ್ತಿದ್ದಾರೆ. ಕೊನೇ ಹಾಡಿನ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಖ್ಯಾತ ನಟಿ ಅಂಜಲಿ ಅವರು ‘ರಾ ರಾ ರೆಡ್ಡಿ.. ಐ ಆ್ಯಮ್ ರೆಡಿ..’ ಎಂದು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ನಲ್ಲಿ ಅವರು ತುಂಬ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್ ಸಾಕ್ಷಿ ಒದಗಿಸುತ್ತಿದೆ. ಇದರ ಲಿರಿಕಲ್ ವಿಡಿಯೋ ಜುಲೈ 9ರಂದು ಬಿಡುಗಡೆ ಆಗಲಿದೆ.
ಸ್ಪೆಷಲ್ ಸಾಂಗ್ನಲ್ಲಿ ಡ್ಯಾನ್ಸ್ ಮಾಡಿದರೆ ನಟಿಯರ ಜನಪ್ರಿಯತೆ ಹೆಚ್ಚುತ್ತದೆ. ‘ಹೂ ಅಂತೀಯಾ ಮಾವ..’ ಹಾಡಿನಲ್ಲಿ ಸ್ಟೆಪ್ ಹಾಕಿದ ಸಮಂತಾಗೆ ಭರ್ಜರಿ ಯಶಸ್ಸು ಸಿಕ್ಕಿತು. ‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ‘ರಾ ರಾ ರೆಡ್ಡಿ..’ ಗೀತೆಯಿಂದ ಅಂಜಲಿ ಸಹ ಅಂಥದ್ದೇ ಯಶಸ್ಸು ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್ ನಟ ರಿತೇಶ್ ದೇಶಮುಖ್