
ಅನುಪಮ್ ಖೇರ್, ಬಾಲಿವುಡ್ನ ಹಿರಿಯ ಮತ್ತು ಬಲು ಜನಪ್ರಿಯ ನಟ. ರಾಷ್ಟ್ರಪ್ರಶಸ್ತಿ ವಿಜೇತ ನಟರಾದ ಅನುಪಮ್ ಖೇರ್ ಕೆಲ ಹಾಲಿವುಡ್ ಸಿನಿಮಾಗಳಲ್ಲೂ ಸಹ ನಟನೆ ಮಾಡಿದ್ದಾರೆ. ಅನುಪಮ್ ಖೇರ್, ಬಾಲಿವುಡ್ನ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ನಟನಾ ಶಾಲೆಯನ್ನು ಸಹ ನಡೆಸುತ್ತಾರೆ. ಅನುಪಮ್ ಖೇರ್ ಅವರ ‘ಆಕ್ಟರ್ ಪ್ರಿಪೇರ್ಸ್’ ಶಾಲೆಯಲ್ಲಿ, ಈಗ ಬಾಲಿವುಡ್ನಲ್ಲಿ ಹೆಸರು ಮಾಡಿರುವ ಹಲವು ಜನಪ್ರಿಯ ತಾರೆಯರು ಕಲಿತಿದ್ದಾರೆ. ಅವರಲ್ಲಿ ನಟಿ ದೀಪಿಕಾ ಪಡುಕೋಣೆ ಸಹ ಒಬ್ಬರು.
ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಾಗಾರವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅನುಪಮ್ ಖೇರ್, ನಟನೆಯ ಬಗ್ಗೆ ಮಾತನಾಡುತ್ತಾ, ದೀಪಿಕಾ ಪಡುಕೋಣೆ ಅವರು ತಮ್ಮ ‘ಆಕ್ಟರ್ ಪ್ರಿಪೇರ್ಸ್’ ತರಗತಿಗೆ ಬಂದಾಗ ನಡೆದಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಅನುಪಮ್ ಖೇರ್ ಅವರ ಶಾಲೆಯ ಎರಡನೇ ಬ್ಯಾಚಿಗೆ ದೀಪಿಕಾ ಪಡುಕೋಣೆ ಸೇರಿಕೊಂಡಿದ್ದರಂತೆ.
ಘಟನೆಯನ್ನು ವಿವರಿಸಿದ ಅನುಪಮ್ ಖೇರ್, ‘ನಮ್ಮ ಶಾಲೆಗೆ ಬರುವ ವೇಳೆಗೆ ದೀಪಿಕಾ ಪಡುಕೋಣೆ ಬಹಳ ಜನಪ್ರಿಯ ಮಾಡೆಲ್. ಮತ್ತು ಬಹಳ ಶಿಕ್ಷಿತ ಹಿನ್ನೆಲೆಯಿಂದ ಅವರು ಬಂದಿದ್ದರು. ಎಲ್ಲವನ್ನೂ ಒಂದು ಸರಿಯಾದ ಕ್ರಮದಲ್ಲಿ ಅವರು ಮಾಡುತ್ತಿದ್ದರು. ಅವರ ಪ್ರತಿ ಕದಲಿಕೆಗೂ ಒಂದು ಸ್ಟೈಲ್ ಇರುತ್ತಿತ್ತು. ಅಚ್ಚುಕಟ್ಟಾದ ಮತ್ತು ಮರ್ಯಾದಸ್ಥ ರೀತಿಯಲ್ಲಿ ಮಾತ್ರವೇ ಅವರ ಎಲ್ಲ ಬಾಡಿ ಲಾಂಗ್ವೇಜ್ ಇರುತ್ತಿತ್ತು.
ಇದನ್ನೂ ಓದಿ:ಬಾಲಿವುಡ್ ಅಂಗಳದಿಂದ ಕನ್ನಡಕ್ಕೆ ಬಂದ ಖಳನಟ ಪ್ರಶಾಂತ್
ಒಮ್ಮೆ ನಾನು ಅವರಿಗೆ ಮನೆ ಒರೆಸುವ ಕೆಲಸದವರ ಪಾತ್ರದಲ್ಲಿ ನಟಿಸಲು ಹೇಳಿದೆ. ದೀಪಿಕಾಗೆ ನೆಲ ಒರೆಸುವ ಕೆಲಸ ಕೊಟ್ಟೆ. ದೀಪಿಕಾರ ಹಿನ್ನೆಲೆ, ಅವರ ಬೆಳೆದು ಬಂದ ರೀತಿಯ ಕಾರಣಕ್ಕೆ ಅವರು ನೆಲ ಒರೆಸುವುದನ್ನೂ ಸಹ ‘ಪ್ರಾಪರ್’ ಆಗಿ ಮಾಡುತ್ತಿದ್ದರು. ಆದರೆ ಅದು ನಟನೆ ಅಲ್ಲ, ನೆಲ ಒರೆಸುವರು ಎಂದರೆ ನೆಲ ಒರೆಸುವವರ ರೀತಿಯೇ ಇರಬೇಕು. ದೀಪಿಕಾ ಮಾಡುತ್ತಿದ್ದ ರೀತಿ ನನಗೆ ಸರಿಬರಲಿಲ್ಲ. ಸರಿಯಾಗಿ ಮಾಡುವವರೆಗೆ ನೆಲ ಒರೆಸುವಂತೆ ನಾನು ಹೇಳಿದೆ. ದೀಪಿಕಾಗೆ ಅಂದು ಕಣ್ಣಲ್ಲಿ ನೀರು ಬಂದು ಬಿಟ್ಟಿತು. ನನ್ನ ಮೇಲೆ ಸಿಟ್ಟು, ಬೇಸರ ಎಲ್ಲ ಬಂದಿತ್ತು. ಆದರೂ ದೀಪಿಕಾ ಕೊನೆಗೂ ಅದನ್ನು ಸರಿಯಾಗಿ ಮಾಡಿದರು. ಕೋರ್ಸ್ ಮುಗಿದಾಗ ನನಗೆ ಧನ್ಯವಾದ ಹೇಳಿ ಹೋದರು’ ಎಂದಿದ್ದಾರೆ ಅನುಪಮ್ ಖೇರ್.
‘ಓಂ ಶಾಂತಿ ಓಂ’ ಸಿನಿಮಾ ಮೂಲಕ ನಟನೆ ಪ್ರವೇಶಿಸಿದ ದೀಪಿಕಾ ಪಡುಕೋಣೆ ಈಗ ಬಾಲಿವುಡ್ನ ಸ್ಟಾರ್ ನಟಿ. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಟಿಸಬಲ್ಲ ನಟಿಯಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ