30 ಕೋಟಿ ರೂ. ಇದ್ದರೂ ಹಾಳಾಯ್ತು ಯೂಟ್ಯೂಬರ್ ಜೀವನ; ನಡೆಯಲು ಆಗದ ಸ್ಥಿತಿ

ಯೂಟ್ಯೂಬ್​ನಿಂದ 30 ಕೋಟಿ ರೂ. ಗಳಿಸಿದ್ದ ಅನುರಾಗ್ ದೊಭಾಲ್ ಈಗ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅವರ ಜೀವನ ನಿಜಕ್ಕೂ ನರಕ ಆಗಿದೆ. ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ದೊಭಾಲ್ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

30 ಕೋಟಿ ರೂ. ಇದ್ದರೂ ಹಾಳಾಯ್ತು ಯೂಟ್ಯೂಬರ್ ಜೀವನ; ನಡೆಯಲು ಆಗದ ಸ್ಥಿತಿ
Anurag Dobhal

Updated on: Mar 25, 2026 | 6:20 PM

‘ನನಗೆ ಮತ್ತೆ ನಡೆಯಲು ಸಾಧ್ಯವಿಲ್ಲವೇ ಅಂತ ಆತಂಕವಾಗುತ್ತಿದೆ’ ಎಂದು ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ (Anurag Dobhal) ಅವರು ಕಣ್ಣೀರು ಹಾಕುತ್ತಿದ್ದಾರೆ. ಯೂಟ್ಯೂಬರ್ ಆಗಿ ಖ್ಯಾತಿ ಪಡೆದಿದ್ದ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಬಿಗ್ ಬಾಸ್ 17ರ ಸ್ಪರ್ಧಿಯಾಗಿದ್ದ ಅನುರಾಗ್ ದೊಭಾಲ್ ಅವರ ಜೀವನ ಈಗ ನರಕ ಆಗಿದೆ. 30 ಕೋಟಿ ರೂಪಾಯಿ ಆಸ್ತಿ ಇದ್ದರೂ ಕೂಡ ಅವರು ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಅವರ ಆರೋಗ್ಯದ ಅಪ್‌ಡೇಟ್ (Anurag Dobhal Health Update) ತಿಳಿದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿದೆ.

ಶಸ್ತ್ರಚಿಕಿತ್ಸೆಗಳ ನಂತರ ಆಸ್ಪತ್ರೆಯಿಂದ ವಿಡಿಯೋ ಹಂಚಿಕೊಂಡಿರುವ ಅನುರಾಗ್, ‘ಜೀವನದಲ್ಲಿ ನಾನು ಮತ್ತೆ ಎಂದಾದರೂ ನಡೆಯಲು ಸಾಧ್ಯವೇ ಅಥವಾ ಇಲ್ಲವೇ’ ಎಂಬ ನೋವಿನ ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿ ಅವರು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದು ಕಾಣಬಹುದು. ‘ನನ್ನ ಒಂದು ಕಾಲು ಸಂಪೂರ್ಣವಾಗಿ ಮರಗಟ್ಟಿದೆ. ಅದನ್ನು ಸರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಸೊಂಟದ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಕಾಲಿನ ನರಗಳು ಹಾನಿಗೊಳಗಾಗಿವೆ. ನಾನು ಹೇಗೆ ಗುಣಮುಖನಾಗುತ್ತೇನೋ ಗೊತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಅನುರಾಗ್ ದೊಭಾಲ್ ಅವರು ‘ಇದು ನನ್ನ ಕೊನೆಯ ವಿಡಿಯೋ’ ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಪ್ರೇಯಸಿ ರಿತಿಕಾ ಜೊತೆ ಅಂತರ್​ಜಾತಿ ವಿವಾಹ ಮಾಡಿಕೊಂಡಿದ್ದಕ್ಕೆ ಕುಟುಂಬದವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಬ್ಯಾಂಕ್ ಖಾತೆಯ ನಿಯಂತ್ರಣವನ್ನು ಕೂಡ ಕುಟುಂಬದವರು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದರು.

ಮಾರ್ಚ್ 7ರಂದು ದೆಹಲಿ-ಮೀರಟ್ ಎಕ್ಸ್‌ಪ್ರೆಸ್‌ವೇನಲ್ಲಿ ತಮ್ಮ ಟೊಯೋಟಾ ಫಾರ್ಚುನರ್ ಕಾರನ್ನು 140-150 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಾ ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದ ಅನುರಾಗ್ ದೊಭಾಲ್ ಅವರು, ಭೀಕರವಾಗಿ ಅಪಘಾತಕ್ಕೀಡಾಗಿದ್ದರು. ನಂತರ ಅವರನ್ನು ಗಂಭೀರ ಸ್ಥಿತಿಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ ಸ್ಥಿತಿ ಗಂಭೀರ: ಹೆಚ್ಚಿದೆ ಶ್ವಾಸಕೋಶದ ಸೋಂಕು

ಅಭಿಮಾನಿಗಳ ಹಾರೈಕೆ: ಅನುರಾಗ್ ಅವರ ಈ ವಿಡಿಯೋ ನೋಡಿ ಅಭಿಮಾನಿಗಳು ಮರುಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ಹಂತದಲ್ಲಿ ಮಾನಸಿಕ ಧೈರ್ಯ ಮುಖ್ಯ ಎಂದು ಹಲವರು ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us