ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahaman) ಅವರು ಚಿತ್ರರಂಗದಲ್ಲಿ 3 ದಶಕ ಕಳೆದಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ. ಅವರಿಗೆ ಆಸ್ಕರ್, ಗ್ರ್ಯಾಮಿ, ಗೋಲ್ಡನ್ ಗ್ಲೋಬ್ ಸೇರಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಅದೆಲ್ಲವನ್ನೂ ಎಲ್ಲಿ ಇಟ್ಟಿದ್ದಾರೆ ಎಂದು ಇತ್ತೀಚೆಗೆ ರೆಹಮಾನ್ ಅವರಿಗೆ ಕೇಳಲಾಯಿತು. ಇದಕ್ಕೆ ಎಆರ್ ರೆಹಮಾನ್ ಅವರು ನೀಡಿದ ಉತ್ತರ ಕೇಳಿ ಅನೇಕರಿಗೆ ಅಚ್ಚರಿ ಎನಿಸಿದೆ. ಆಸ್ಕರ್ ಸೇರಿ ಅನೇಕ ವಿದೇಶಿ ಅವಾರ್ಡ್ಗಳಿಗೆ ಚಿನ್ನದ ಲೇಪನ ಇರುತ್ತದೆ. ಸಂಪುರ್ಣ ಅವಾರ್ಡ್ ಚಿನ್ನದಿಂದ ಮಾಡಲ್ಪಟ್ಟಿದ್ದು ಎಂದು ರೆಹಮಾನ್ ತಾಯಿ ಕರೀಮಾ ಬೇಗಂ ಭಾವಿಸಿದ್ದರಂತೆ.
ರೆಹಮಾನ್ ಅವರ ಬಳಿ 2 ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್ಫೇರ್ ಅವಾರ್ಡ್ಗಳು ಸಿಕ್ಕಿವೆ. ಇದೆಲ್ಲ ಅವಾರ್ಡ್ಗಳನ್ನು ಅವರು ಚೆನ್ನೈನ ಮನೆಯ ವಿಶೇಷ ರೂಂನಲ್ಲಿ ಇರಿಸಿದ್ದಾರೆ. ‘ಕೆಲವು ಅವಾರ್ಡ್ಗಳು ನನ್ನ ಬಳಿ ಬಂದೇ ಇಲ್ಲ. ಬಹುಶಃ ನಿರ್ದೇಶಕರು ಅದನ್ನು ಸ್ಮರಣಿಕೆ ಎನ್ನುವ ಅರ್ಥದಲ್ಲಿ ಅದನ್ನು ಇಟ್ಟುಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ನಾನು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ದುಬೈನಲ್ಲಿ ಇಟ್ಟಿದ್ದೇನೆ. ನನ್ನ ತಾಯಿ ಟವೆಲ್ನಲ್ಲಿ ಸುತ್ತಿ ದುಬೈ ಮನೆಯಲ್ಲಿ ಇಟ್ಟಿದ್ದರು. ಅವುಗಳು ಅಸಲಿ ಚಿನ್ನದಿಂದ ಮಾಡಿದ್ದು ಎಂದು ಅವರು ಭಾವಿಸಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ಅವರು.
ಭಾರತದ ಯಾವುದೇ ಮ್ಯೂಸಿಕ್ ಡೈರೆಕ್ಟರ್ ಆಸ್ಕರ್ ಗೆದ್ದಿರಲಿಲ್ಲ. ಭಾರತದಲ್ಲಿ ಮೊದಲು ಆಸ್ಕರ್ ಗೆದ್ದ ಖ್ಯಾತಿ ಇವರಿಗೆ ಇದೆ. ‘ಸ್ಲಮ್ಡಾಗ್ ಮಿಲಿಯನೇರ್’ ಚಿತ್ರದ ಹಾಡುಗಳಿಗೆ ಅವರಿಗೆ ಅವಾರ್ಡ್ ಸಿಕ್ಕಿದೆ. ಈ ಚಿತ್ರದ ‘ಜೈ ಹೋ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು.
ಇದನ್ನೂ ಓದಿ: ಎಆರ್ ರೆಹಮಾನ್ ಸಿನಿ ಜರ್ನಿ ಆರಂಭಿಸಿದ್ದು ಹೇಗೆ? ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?
ಎಆರ್ ರೆಹಮಾನ್ ಅವರು ಸದ್ಯ ಸಖತ್ ಬ್ಯುಸಿ ಇದ್ದಾರೆ. ಹಿಂದಿಯ ‘ರಾಮಾಯಣ’, ರಾಮ್ ಚರಣ್ ನಟನೆಯ 16ನೇ ಸಿನಿಮಾ ಸೇರಿ ಒಟ್ಟೂ 10ಕ್ಕೂ ಅಧಿಕ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಜೊತೆ ಮ್ಯೂಸಿಕ್ ಕಾನ್ಸರ್ಟ್ಗಳನ್ನು ಕೂಡ ಮಾಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:19 am, Wed, 22 May 24