ಕೊರೊನಾ ವೈರಸ್ನಿಂದಾಗಿ ಸೆಲೆಬ್ರಿಟಿಗಳ ಸಾವಿನ ಸರಣಿ ಮುಂದುವರಿದಿದೆ. ಅನೇಕ ಸಿನಿಮಾ ನಟ-ನಟಿಯರ ಮತ್ತು ತಂತ್ರಜ್ಞರ ನಿಧನಕ್ಕೆ ಕಾರಣವಾಗಿದ್ದ ಈ ಮಹಾಮಾರಿ ಈಗ ಕಾಲಿವುಡ್ನ ಖ್ಯಾತ ನಟ ನಿತೀಶ್ ವೀರಾ ಅವರನ್ನು ಬಲಿ ಪಡೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಅವರಿಗೆ ಪಾಸಿಟಿವ್ ವರದಿ ಬಂದಿತ್ತು. ಬಳಿಕ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ. ನಿತೀಶ್ ಅಗಲಿಕೆಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.
ರಜನಿಕಾಂತ್ ನಟನೆಯ ಕಾಲ, ಧನುಷ್ ಅಭಿನಯದ ಅಸುರನ್ ಸಿನಿಮಾಗಳಲ್ಲಿ ನಿತೀಶ್ ಅವರು ಗಮನಾರ್ಹ ಪಾತ್ರಗಳನ್ನು ನಿಭಾಯಿಸಿದ್ದರು. ಪುಧುಪೆಟ್ಟೈ, ವೆನ್ನಿಲ ಕಬಡಿ ಕುಳು, ರಾಕ್ಷಸಿ, ನೇಟ್ರು ಇಂಡ್ರು, ಪಡೈವೀರನ್ ಮಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಮನ ಗೆದ್ದಿದ್ದರು. ಅವರು ಕೊರೊನಾದಿಂದಾಗಿ ಮೃತರಾಗಿರುವುದು ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ.
ಮೂಲತಃ ಮಧುರೈನವರಾದ ನಿತೀಶ್ ವೀರಾ ಅವರಿಗೆ 7 ಮತ್ತು 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಹೊಸ ಕಾರು ಖರೀದಿಸಿದ್ದರು. ತಮ್ಮ ಎಲ್ಲ ಸ್ನೇಹಿತರನ್ನೂ ಭೇಟಿಯಾಗಿ ಕಾರು ತೋರಿಸಿ ಬಂದಿದ್ದರು ಎನ್ನಲಾಗಿದೆ. ಹೀಗೆ ಖುಷಿಯಾಗಿ ಕಾಲ ಕಾಳೆಯುತ್ತಿದ್ದ ನಿತೀಶ್ ಅವರ ಜೀವಕ್ಕೆ ಕೊರೊನಾ ಕುತ್ತು ತಂದಿದೆ. ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
#RIPNitishVeera
It pains to write this…Acted with him in #Vennilakabbadikuzhu and #MaaveranKittu..
This covid second wave is taking away so many lives..
Be careful and keep your loved ones really close to you…— VISHNU VISHAL – V V (@TheVishnuVishal) May 17, 2021
ಇತ್ತೀಚೆಗಂತೂ ತಮಿಳು ಚಿತ್ರರಂಗಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಲೇ ಇದೆ. ಮೇ 15ರಂದು ಹೃದಯಾಘಾತದಿಂದ ನಟ ಅಯ್ಯಪ್ಪನ್ ಗೋಪಿ ಮತ್ತು ಸಹ ನಿರ್ದೇಶಕ ಪವನ್ರಾಜ್ ನಿಧನರಾದರು. ಅದಕ್ಕೂ ಮುನ್ನ ಕೊವಿಡ್ನಿಂದಾಗಿ ಹಾಸ್ಯ ನಟ ಪಾಂಡು ಇಹಲೋಕ ತ್ಯಜಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ.ವಿ. ಆನಂದ್ ಹಾಗೂ ಖ್ಯಾತ ನಟ ವಿವೇಕ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗ ಕೊವಿಡ್ನಿಂದ ನಿತೀಶ್ ವೀರಾ ಕೊನೆಯುಸಿರೆಳೆದಿರುವುದು ನೋವಿನ ಸಂಗತಿ.
#Asuran #Nitishveera
Shattered to hear that Nitish Anna is no more ,very shocking ,such a wonderful and caring co artist , never expected this , May his soul rest in peace pic.twitter.com/XYYjx2qki0— AmmuAbhirami (@Ammu_Abhirami) May 17, 2021
ಕನ್ನಡದಲ್ಲೂ ಅನೇಕ ಸೆಲೆಬ್ರಿಟಿಗಳು ಕೊವಿಡ್ನಿಂದಾಗಿ ಸಾವಿನ ಮನೆ ಸೇರಿದ್ದಾರೆ. ಖ್ಯಾತ ನಿರ್ಮಾಪಕ ಕೋಟಿ ರಾಮು, ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು, ಯುವ ನಟ-ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಹಿರಿಯ ನಟ ಶಂಖನಾದ ಅರವಿಂದ್ ಮುಂತಾದವರು ಇಹಲೋಕ ತ್ಯಜಿಸಿರುವುದರಿಂದ ಸ್ಯಾಂಡಲ್ವುಡ್ನಲ್ಲೂ ಸೂತಕದ ವಾತಾವರಣ ಮನೆ ಮಾಡಿದೆ.
ಇದನ್ನೂ ಓದಿ:
ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ
ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿ ಕೊವಿಡ್ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್ ಚಿತ್ರತಂಡ