ಅಲ್ಲು ಅರ್ಜುನ್ ಅವರು ದಕ್ಷಿಣದಲ್ಲಿ ಸಾಕಷ್ಟು ಖ್ಯಾತಿ ಹೊಂದಿದ್ದಾರೆ. ಅವರು ಒಮ್ಮೆ ಕಾಲ್ಶೀಟ್ ಕೊಟ್ಟರೆ ಮುಗಿಯಿತು. ಆ ಸಿನಿಮಾ ಆಗಿಯೇ ಆಗುತ್ತದೆ. ಆದರೆ, ಈಗ ಅವರನ್ನು ಸಿನಿಮಾದಿಂದ ತೆಗೆಯಲಾಗಿದೆಯಂತೆ. ಅಲ್ಲು ಅರ್ಜುನ್ ಬದಲಿಗೆ ಸಲ್ಮಾನ್ ಖಾನ್ (Salman Kahn) ಅವರನ್ನು ಚಿತ್ರಕ್ಕೆ ಸೇರ್ಪಡೆ ಮಾಡಲಾಗಿದೆ. ಇದು ಅಪರೂಪದ ಘಟನೆ ಎಂದು ತೆಲುಗು ಮಂದಿ ಭಾವಿಸಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ.
ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿ ಆಗಬೇಕಿತ್ತು. ಅಲ್ಲು ಅರ್ಜುನ್ ಅವರಿಗೆ ಸಿನಿಮಾದ ಕಥೆ ಇಷ್ಟ ಆಗಿಲ್ಲ. ಹೀಗಾಗಿ, ಆರಂಭದ ಹಂತದಲ್ಲೇ ಸಿನಿಮಾ ಹಳ್ಳ ಹಿಡಿದಿದೆ ಎಂದು ವರದಿ ಆಗುತ್ತಿದೆ.
ಅಟ್ಲಿ ಅವರು ಸಿನಿಮಾದ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಅಲ್ಲು ಅರ್ಜುನ್ ಈ ಸಿನಿಮಾದಿಂದ ಹೊರಗೆ ಇರೋ ನಿರ್ಧಾರಕ್ಕೆ ಬಂದಿದ್ದಾರೆ. ಈ ಸ್ಕ್ರಿಪ್ಟ್ನ ಅಟ್ಲಿ ಅವರು ಸಲ್ಮಾನ್ ಖಾನ್ಗೆ ಹೇಳೋ ತವಕದಲ್ಲಿ ಇದ್ದಾರೆ. ಒಂದೊಮ್ಮೆ ಇವರ ಮಾತುಕತೆ ಫೈನಲ್ ಆದರೆ, ಅಟ್ಲಿಗೆ ಮತ್ತೊಂದು ಬಿಗ್ ಆಫರ್ ಸಿಕ್ಕಂತೆ ಆಗಲಿದೆ.
ಸಲ್ಮಾನ್ ಖಾನ್ ಅವರು ಬಾಲಿವುಡ್ ನಿರ್ದೇಶಕರ ಜೊತೆ ಕೆಲಸ ಮಾಡಿ ಗೆಲುವೇ ಕಾಣದಂತೆ ಆಗಿದ್ದಾರೆ. ಹೀಗಾಗಿ, ತಮಿಳು ನಿರ್ದೇಶಕ ಮುರುಗದಾಸ್ ಜೊತೆ ಅವರು ಸಿನಿಮಾ ಮಾಡುತ್ತಿದ್ದು, ‘ಸಿಕಂದರ್’ ಎನ್ನುವ ಟೈಟಲ್ ಇಡಲಾಗಿದೆ. ಹೀಗಿರುವಾಗಲೇ ಅವರಿಗೆ ದಕ್ಷಿಣ ನಿರ್ದೇಕನಿಂದ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದೆ.
ಅಟ್ಲಿ ಅವರು ಈ ಚಿತ್ರದ ನಿರ್ದೇಶನಕ್ಕೆ 80 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ನಿರ್ದೇಶಕನಿಗೆ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಕೊಟ್ಟರೆ ಬಜೆಟ್ ಮಿತಿ ಮೀರಲಿದೆ ಎನ್ನಲಾಗುತ್ತಿದೆ. ಅಟ್ಲಿ ಅವರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಸದ್ಯಕ್ಕಂತೂ ಸಿನಿಮಾ ಸೆಟ್ಟೇರೋ ಸಾಧ್ಯತೆ ಕಡಿಮೆಯೇ.
ಶಾರುಖ್ ಖಾನ್ ಅವರ ಜೊತೆ ಅಟ್ಲಿ ‘ಜವಾನ್’ ಸಿನಿಮಾ ಮಾಡಿದ್ದರು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಈ ಸಿನಿಮಾ ಸಾವಿರ ಕೋಟಿ ಬಿಸ್ನೆಸ್ ಮಾಡಿದೆ. ಈ ಕಾರಣದಿಂದಲೇ ನಿರ್ಮಾಪಕರಿಗೆ ಅಟ್ಲಿ ಬಗ್ಗೆ ನಂಬಿಕೆ ಬಂದಿದೆ.
ಇದನ್ನೂ ಓದಿ: ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್ ಪ್ರಭು ನಾಯಕಿ?
ಅಟ್ಲಿ ಅವರು ಬಾಲಿವುಡ್ನಲ್ಲೇ ಬ್ಯುಸಿ ಇದ್ದಾರೆ. ವರುಣ್ ಧವನ್ ಚಿತ್ರಕ್ಕೆ ಅವರು ನಿರ್ಮಾಪಕರಾಗಿದ್ದಾರೆ. ಇದು ‘ತೇರಿ’ ಚಿತ್ರದ ರಿಮೇಕ್. ಈ ಚಿತ್ರಕ್ಕೆ ‘ಬೇಬಿ ಜಾನ್’ ಎನ್ನುವ ಟೈಟಲ್ ಇಡಲಾಗಿದೆ. ಸದ್ಯ ಬಾಲಿವುಡ್ನಲ್ಲಿ ಯಾವುದೇ ರಿಮೇಕ್ ಸಿನಿಮಾಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ, ಈ ಚಿತ್ರ ಗೆಲ್ಲುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ .
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Tue, 18 June 24