‘ಅಯೋಧ್ಯೆಯಲ್ಲಿ ಯಾವಾಗಲೂ ರಾಜನಿಗೆ ದ್ರೋಹವೇ ಆಗಿದೆ’; ಬೇಸರ ಹೊರಹಾಕಿದ ಲಕ್ಷ್ಮಣ ಪಾತ್ರಧಾರಿ

ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸುನೀಲ್, ಲೋಕಸಭೆ ಚುನಾವಣೆ ಫಲಿತಾಂಶ ನೋಡಿ ನನಗೆ ತುಂಬಾ ಕೋಪ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ತಮ್ಮ ನೆಚ್ಚಿನ ಇಬ್ಬರು ವ್ಯಕ್ತಿಗಳು ಗೆದ್ದಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.

‘ಅಯೋಧ್ಯೆಯಲ್ಲಿ ಯಾವಾಗಲೂ ರಾಜನಿಗೆ ದ್ರೋಹವೇ ಆಗಿದೆ’; ಬೇಸರ ಹೊರಹಾಕಿದ ಲಕ್ಷ್ಮಣ ಪಾತ್ರಧಾರಿ
ಸುನಿಲ್ ಲಹಿರಿ
Edited By:

Updated on: Jun 06, 2024 | 12:14 PM

2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋತಿದೆ. ಇದೇ ಕ್ಷೇತ್ರದಲ್ಲಿ ಅಯೋಧ್ಯೆ ಕೂಡ ಬರುತ್ತದೆ. ಕೆಲವು ತಿಂಗಳ ಹಿಂದೆ ಭವ್ಯ ರಾಮ ಮಂದಿರ ಉದ್ಘಾಟನೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಲ್ಲಿ ಸಾಕಷ್ಟು ಗಮನ ಸೆಳೆದರು. ಆದಾಗ್ಯೂ ಇಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಗೆದ್ದಿದ್ದಾರೆ. ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ನಟ ಸುನಿಲ್ ಲಾಹಿರಿ ಅವರು ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನಿಂದ ತೀವ್ರ ಬೇಸರಗೊಂಡಿದ್ದಾರೆ. ಅಯೋಧ್ಯೆ ಮಾತ್ರವಲ್ಲ ಇಡೀ ಲೋಕಸಭೆ ಚುನಾವಣೆಯ ಟ್ರೆಂಡ್‌ಗಳಿಂದ ಸುನಿಲ್‌ಗೆ ಸ್ವಲ್ಪವೂ ಸಂತೋಷವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಪೋಸ್ಟ್‌ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸುನೀಲ್, ಲೋಕಸಭೆ ಚುನಾವಣೆ ಫಲಿತಾಂಶ ನೋಡಿ ನನಗೆ ತುಂಬಾ ಕೋಪ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ತಮ್ಮ ನೆಚ್ಚಿನ ಇಬ್ಬರು ವ್ಯಕ್ತಿಗಳು ಗೆದ್ದಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ. ‘ಜೈ ಶ್ರೀ ರಾಮ್.  ಸ್ನೇಹಿತರೇ ನಾನು ಯಾವಾಗಲೂ ವೋಟ್ ಮಾಡಿ ವೋಟ್ ಮಾಡಿ ಎಂದು ಹೇಳುತ್ತಿದ್ದೆ. ಆದರೆ ಯಾರೂ ನನ್ನ ಮಾತು ಕೇಳಲಿಲ್ಲ. ಈಗ ಫಲಿತಾಂಶವನ್ನು ನೋಡಿ. ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಈ ಸರ್ಕಾರ 5 ವರ್ಷ ಇರಬಹುದೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಇದೆಲ್ಲದರ ನಡುವೆ ನನ್ನ ನೆಚ್ಚಿನ ಇಬ್ಬರು ವ್ಯಕ್ತಿಗಳಾದ ಕಂಗನಾ ರಣಾವತ್ ಮತ್ತು ಅರುಣ್ ಗೋವಿಲ್ ಅವರು ಈ ಚುನಾವಣೆಯಲ್ಲಿ ಗೆದ್ದಿರುವುದು ನನಗೆ ಖುಷಿ ತಂದಿದೆ. ನಾನು ಇಬ್ಬರನ್ನೂ ಅಭಿನಂದಿಸಲು ಬಯಸುತ್ತೇನೆ. ಮತ್ತು ಅವರ ಮುಂದಿನ ಪ್ರಯಾಣಕ್ಕೆ ನನ್ನ ಶುಭಾಶಯಗಳು’ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯ ಜನರ ಮೇಲೆ ಕೋಪ

ಅಯೋಧ್ಯೆಯ ಜನರ ಮೇಲೆ ಸುನಿಲ್ ಲಾಹಿರಿ ಕೋಪಗೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅನೇಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್‌ನಲ್ಲಿ ಅವರು ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪನು ಅಮರೇಂದ್ರ ಬಾಹುಬಲಿಗೆ ಹಿಂಭಾಗದಿಂದ ಕತ್ತಿಯನ್ನು ಇರಿಯುತ್ತಿರುವ ದೃಶ್ಯ ಇದೆ. ಇದರಲ್ಲಿ ಕಟ್ಟಪ್ಪನ್ನು ಅಯೋಧ್ಯೆ ಎಂದು ಕರೆದರೆ, ಬಾಹುಬಲಿ ಪ್ರಭಾಸ್ ಅವರನ್ನು ಬಿಜೆಪಿ ಎಂದು ಕರೆದಿದ್ದಾರೆ. ಈ ರೀತಿಯ ಪೋಸ್ಟ್​ನ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಸಿದವರಿಗೆ ಸೋನು ನಿಗಮ್ ಛೀಮಾರಿ? ಅಸಲಿಯತ್ತು ಏನು?

ಈ ಪೋಸ್ಟ್ ಜೊತೆಗೆ, ಅವರು ಅಯೋಧ್ಯೆಯ ಜನರ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ‘ಜನರೇ ನಿಮ್ಮ ಶ್ರೇಷ್ಠತೆಗೆ ನಾನು ನಮಸ್ಕರಿಸುತ್ತೇನೆ. ವನವಾಸದಿಂದ ಹಿಂದಿರುಗಿದ ನಂತರ ಸೀತಾದೇವಿಯನ್ನು ಅನುಮಾನಿಸಿದ ಅಯೋಧ್ಯೆಯ ಪ್ರಜೆಗಳು ಇವರೇ ಎಂಬುದನ್ನು ನಾವು ಮರೆಯುತ್ತಿದ್ದೇವೆ. ದೇವರನ್ನು ನಿರಾಕರಿಸುವ ವ್ಯಕ್ತಿಯನ್ನು ನೀವು ಏನೆಂದು ಕರೆಯುತ್ತೀರಿ? ಸ್ವಾರ್ಥಿ. ಅಯೋಧ್ಯೆಯ ಪ್ರಜೆಗಳು ಯಾವಾಗಲೂ ತಮ್ಮ ರಾಜನಿಗೆ ದ್ರೋಹ ಬಗೆಯುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅವರಿಗೆ ನಾಚಿಕೆಯಾಗಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.