
ನಂದಮೂರಿ (Nandamuri) ಕುಟುಂಬ ತೆಲುಗು ಚಿತ್ರರಂಗ ಹಾಗೂ ರಾಜಕೀಯದ ಮೇಲೆ ದಶಕಗಳಿಂದಲೂ ಹಿಡಿತ ಸಾಧಿಸಿಟ್ಟುಕೊಂಡಿದೆ. ನಂದಮೂರಿ ಕುಟುಂಬದ ಹಲವಾರು ಮಂದಿ ತೆಲುಗು ಚಿತ್ರರಂಗವನ್ನು ಆಳಿದ್ದಾರೆ. ಈಗಲೂ ಆಳುತ್ತಿದ್ದಾರೆ. ರಾಜಕೀಯದಲ್ಲಿಯೂ ಸಹ ಈ ಕುಟುಂಬಕ್ಕೆ ದೊಡ್ಡ ಯಶಸ್ಸು ದೊರೆತಿದೆ. ಇದೀಗ ಇದೇ ಕುಟುಂಬದ ಮತ್ತೊಬ್ಬ ಸದಸ್ಯ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಾಜ್ಞ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲೇ ಸಿನಿಮಾ ಒಂದರ ಘೋಷಣೆ ಮಾಡಿದ್ದರು. ಆದರೆ ಆ ಸಿನಿಮಾವನ್ನು ಪಕ್ಕಕ್ಕಿರಿಸಿ ಈಗ ಮತ್ತೊಂದು ಸಿನಿಮಾ ಅನ್ನು ಕೈಗೆತ್ತಿಕೊಂಡಿದ್ದಾರೆ.
ಮೋಕ್ಷಾಜ್ಞ, ತಮ್ಮ ತಂದೆ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್ ಮೂಲಕ ಮೋಕ್ಷಜ್ಞ ನಾಯಕ ನಟನಾಗಿ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾನಲ್ಲಿ ಮೋಕ್ಷಜ್ಞ ತಂದೆ ಬಾಲಕೃಷ್ಣ ಸಹ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತಃ ನಂದಮೂರಿ ಬಾಲಕೃಷ್ಣ ಖಾತ್ರಿ ಪಡಿಸಿದ್ದಾರೆ. ‘ನಾನು ಹಾಗೂ ನನ್ನ ಮಗ ಮೋಕ್ಷ, ‘ಆದಿತ್ಯ’ ಸಿನಿಮಾದ ಸೀಕ್ವೆಲ್ನಲ್ಲಿ ಒಟ್ಟಿಗೆ ನಟಿಸಲಿದ್ದೇವೆ’ ಎಂದಿದ್ದಾರೆ.
‘ಆದಿತ್ಯ 369’ ಹೆಸರಿನ ಸಿನಿಮಾನಲ್ಲಿ ಬಾಲಯ್ಯ ನಟಿಸಿದ್ದರು. ಈ ಸಿನಿಮಾ 1991 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ಅಂಬರೀಶ್ ಪುರಿ ಸೇರಿದಂತೆ ಹಲವು ಜನಪ್ರಿಯ ನಟರುಗಳು ಇದ್ದರು. ಸಿನಿಮಾ ಮಾಯಾ ಲೋಕ, ವಿಜ್ಞಾನ ಅಂಶಗಳನ್ನು ಒಳಗೊಂಡಿದ್ದ ಫ್ಯಾಂಟಸಿ ಸಿನಿಮಾ ಆಗಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗಲೂ ಸಹ ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಸಿನಿಮಾ ಅನ್ನು ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ನಿರ್ದೇಶನ ಮಾಡಿದ್ದರು. ಈಗ ಇದೇ ಸಿನಿಮಾದ ಸೀಕ್ವೆಲ್ ನಲ್ಲಿ ಬಾಲಯ್ಯ ಪುತ್ರ ನಟಿಸಲಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿಗೆ ತೆಲುಗು ಬಿಟ್ಟು ಹೊರಬಂದ ಬಾಲಕೃಷ್ಣ: ಗೆಲುವು ಸಾಧ್ಯವಾ?
ಈಗ ನಂದಮೂರಿ ಬಾಲಕೃಷ್ಣ ಮತ್ತು ಮೋಕ್ಷಜ್ಞ ನಟಿಸಲಿರುವ ಸಿನಿಮಾ ‘ಆದಿತ್ಯ 999 ಮ್ಯಾಕ್ಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಕತೆಯನ್ನು ಬಾಲಕೃಷ್ಣ ಅವರೇ ಬರೆದಿದ್ದಾರಂತೆ ಅದೂ ಕೇವಲ ಒಂದು ರಾತ್ರಿಯಲ್ಲಿ. ಈ ಸಿನಿಮಾವನ್ನು ಕೃಷ್ ಜಗರ್ಲಮುಡಿ ಅವರು ನಿರ್ದೇಶನ ಮಾಡಲಿದ್ದಾರೆ. ಕೃಷ್ ಅವರು ಈ ಹಿಂದೆ ಬಾಲಕೃಷ್ಣ ನಟನೆಯ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದು, ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಬಾಲಯ್ಯ ತನ್ನ ಮಗಲ ಲಾಂಚಿಂಗ್ ಸಿನಿಮಾದ ಜವಾಬ್ದಾರಿಯನ್ನು ಕ್ರಿಷ್ಗೆ ನೀಡಿದ್ದಾರೆ.
ಇದರ ಹೊರತಾಗಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಬಾಲಯ್ಯ ಉಗ್ರರೂಪಿ ಋಷಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಲಯ್ಯ ಅವರದ್ದು ದ್ವಿಪಾತ್ರ. ಈ ಸಿನಿಮಾದ ಬಳಿಕ ‘ಆದಿತ್ಯ 999 ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಬಾಲಯ್ಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Tue, 25 November 25