‘ಈಗಲೇ ಕಿತ್ತುಹಾಕಿ’: ಜೂ ಎನ್​ಟಿಆರ್ ಫ್ಲೆಕ್ಸ್ ತೆಗೆಸಿದ ಬಾಲಕೃಷ್ಣ

|

Updated on: Jan 18, 2024 | 3:51 PM

Jr NTR: ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಗುಟ್ಟಲ್ಲ. ತಂದೆಯ ಪಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬಂದ ಬಾಲಕೃಷ್ಣ, ಅಲ್ಲಿ ಜೂ ಎನ್​ಟಿಆರ್ ಫ್ಲೆಕ್ಸ್, ಬ್ಯಾನರ್​ಗಳನ್ನು ನೋಡಿ ಸಿಟ್ಟಾಗಿ ಕಿತ್ತುಹಾಕಿ ಎಂದಿರುವ ವಿಡಿಯೋ ವೈರಲ್ ಆಗಿದೆ.

‘ಈಗಲೇ ಕಿತ್ತುಹಾಕಿ’: ಜೂ ಎನ್​ಟಿಆರ್ ಫ್ಲೆಕ್ಸ್ ತೆಗೆಸಿದ ಬಾಲಕೃಷ್ಣ
Follow us on

ನಂದಮೂರಿ (Nandamuri) ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ನಂದಮೂರಿ ಕುಟುಂಬದ ಜೂ ಎನ್​ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಒಂದೆಡೆ ಆದರೆ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಮತ್ತೋಂದೆಡೆ ಎಂಬಂತಾಗಿದ್ದಾರೆ. ಇದೀಗ ಈ ಇಬ್ಬರ ನಡುವೆ ಅದೆಷ್ಟು ದ್ವೇಷವಿದೆ, ವೈಷಮ್ಯವಿದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ದೊರೆತಿದೆ.

ಇಂದು (ಜನವರಿ 18) ಎನ್​ಟಿಆರ್ ಅವರ 18ನೇ ಪುಣ್ಯಸ್ಮರಣೆ. ಎನ್​ಟಿಆರ್ ಘಾಟ್​ ಬಳಿ ನಂದಮೂರಿ ಕುಟುಂಬದ ಗಣ್ಯರ ಭಾವಚಿತ್ರಗಳುಳ್ಳ ಫ್ಲೆಕ್ಸ್ ಬ್ಯಾನರ್​ಗಳನ್ನು ಅಭಿಮಾನಿಗಳು ಅಳವಡಿಸಿದ್ದರು. ಎನ್​ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರುಗಳು ಬೆಳ್ಳಂಬೆಳಿಗ್ಗೆ ಆಗಮಿಸಿ ಎನ್​ಟಿಆರ್ ಸಮಾಧಿಗೆ ನಮಿಸಿ ತೆರಳಿದರು. ಅದಾದ ಬಳಿಕ ತುಸು ತಡವಾಗಿ ಬಂದ ನಂದಮೂರಿ ಬಾಲಕೃಷ್ಣ ಅಲ್ಲಿ ಹಾಕಲಾಗಿದ್ದ ಎನ್​ಟಿಆರ್ ಹಾಗೂ ಕಲ್ಯಾಣ್​ರಾಮ್​ರ ಫ್ಲೆಕ್ಸ್​ಗಳನ್ನು ನೋಡುತ್ತಲೇ ಗರಂ ಆದರು.

ತನ್ನ ಸಹಾಕನ ಬಳಿ ‘ಇವನ್ನೆಲ್ಲ ತೆಗಿಸು’ ಎಂದರು. ಬಳಿಕ ‘ಈಗಲೇ ಕಿತ್ತು ಹಾಕಿಸು’ ಎಂದು ಕೋಪದಿಂದಲೇ ಹೇಳಿ ಒಳನಡೆದರು. ತಂದೆ ಎನ್​ಟಿಆರ್ ಸಮಾಧಿಗೆ ನಮಿಸಿ ಬಾಲಕೃಷ್ಣ ಹೊರಡುತ್ತಿದ್ದಂತೆ, ಎನ್​ಟಿಆರ್ ಹಾಗೂ ಕಲ್ಯಾಣ್​ರಾಮ್​ರ ಚಿತ್ರಗಳನ್ನು ಹೊಂದಿದ್ದ ಎಲ್ಲ ಫ್ಲೆಕ್ಸ್​ಗಳನ್ನು ಕಿತ್ತು ಹಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:‘ಐ ಲವ್ ರಶ್ಮಿಕಾ’ ಎಂದರಾ ವಿಜಯ್ ದೇವರಕೊಂಡ, ಬಾಲಕೃಷ್ಣ ಎದುರು ನಾಚಿದ ನಟಿ

ಕೆಲ ತಿಂಗಳ ಮುಂಚೆ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಸೇರಿಕೊಂಡು ಎನ್​ಟಿಆರ್ ಅವರ ಜನ್ಮಶತಮಾನೋತ್ಸವವನ್ನು ಆಂಧ್ರ, ತೆಲಂಗಾಣದ ಕೆಲವು ಕಡೆ ಅದ್ಧೂರಿಯಾಗಿ ಆಚರಿಸಿದರು. ನಟ ರಜನೀಕಾಂತ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ಅದೇ ಕುಟುಂಬಕ್ಕೆ ಸೇರಿದ ಜೂ ಎನ್​ಟಿಆರ್ ಹಾಗೂ ಕಲ್ಯಾಣ್ ರಾಮ್​ಗೆ ಆಹ್ವಾನ ನೀಡಿರಲಿಲ್ಲ. ಅಲ್ಲದೆ, ಜೂ ಎನ್​ಟಿಆರ್ ಚಿತ್ರವನ್ನು ಹಿಡಿದು ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳನ್ನು ವಾಪಸ್ ಕಳಿಸಲಾಗಿತ್ತು.

ಈ ಬಿರುಕಿಗೆ ಮೂಲ ಕಾರಣ ಟಿಡಿಪಿ ಪಕ್ಷ ಹಾಗೂ ಅದರ ಮುಖ್ಯಸ್ಥ ಚಂದ್ರಬಾಬು ನಾಯ್ಡು ಎನ್ನಲಾಗುತ್ತಿದೆ. ಜೂ ಎನ್​ಟಿಆರ್​ಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಒಂದೊಮ್ಮೆ ಟಿಡಿಪಿ ಪಕ್ಷಕ್ಕೆ ಅವರು ಬಂದರೆ ಪಕ್ಷದ ನಾಯತ್ವವನ್ನೇ ಅವರಿಗೆ ಬಿಟ್ಟುಕೊಡಬೇಕಾಗುತ್ತದೆ. ಆದರೆ ಚಂದ್ರಬಾಬು ನಾಯ್ಡು ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ರಾಜಕೀಯ ನಾಯಕನನ್ನಾಗಿ ಬೆಳೆಸುವ ಪ್ರಯತ್ನದಲ್ಲಿದ್ದು, ಜೂ ಎನ್​ಟಿಆರ್ ಬಂದರೆ ಇದಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ದೂರ ಇಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಆರಂಭದಲ್ಲಿ ಜೂ ಎನ್​ಟಿಆರ್ ಇದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಚಂದ್ರಬಾಬು ನಾಯ್ಡುಗೆ ಸದನದಲ್ಲಿ ಅವಮಾನವಾದಾಗ ಸಹ ಆ ಬಗ್ಗೆ ವಿಡಿಯೋ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅದಾದ ಬಳಿಕ ಆದ ಕೆಲವು ಘಟನೆಗಳಿಂದ ತೀವ್ರ ಬೇಸರಗೊಂಡ ಜೂ ಎನ್​ಟಿಆರ್. ಚಂದ್ರಬಾಬು ನಾಯ್ಡು ಬಂಧನವಾದಾಗಲೂ ಸಹ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಕುಟುಂಬದ ಜೊತೆಗೆ ವಿದೇಶ ಪ್ರವಾಸಕ್ಕೆ ತೆರಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ