ಭಾರತದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ (Bappi Lahiri) ಮಂಗಳವಾರ ತಡರಾತ್ರಿ (ಫೆ.15) ನಿಧನರಾಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೇಶಕ್ಕೆ ಡಿಸ್ಕೋ ಪರಂಪರೆಯ ಹಾಡುಗಳನ್ನು ಪರಿಚಯಿಸಿದ ಕೀರ್ತಿಯನ್ನು ಹೊಂದಿದ್ದ ಬಪ್ಪಿ, ತೀರಾ ಇತ್ತೀಚಿನವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಹಿಂದಿ, ಬೆಂಗಾಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅವರು, ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಂಗೀತ ಸಂಯೋಜನೆ, ಗಾಯನ ಮಾಡಿದ್ದರು. ಇಂದು ಬಪ್ಪಿ ಲಹಿರಿ ಅಂತ್ಯಕ್ರಿಯೆಯನ್ನು ಮುಂಬೈನ ಪವನ್ ಹನ್ಸ್ ಚಿತಾಗಾರದಲ್ಲಿ ನೆರವೇರಿಸಲಾಗಿದೆ. ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ಖ್ಯಾತ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಬಪ್ಪಿ ಲಹಿರಿ ಅವರು ಪುತ್ರ ಬಪ್ಪ ಲಹಿರಿ, ಪುತ್ರಿ ರೀಮಾ ಲಹಿರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಖ್ಯಾತ ಕಲಾವಿದರಾದ ಅಮಿತಾಭ್ ಬಚ್ಚನ್, ವಿದ್ಯಾ ಬಾಲನ್, ಗಾಯಕರಾದ ಅಲ್ಕಾ ಯಾಗ್ನಿಕ್, ಮಿಕಾ ಸಿಂಗ್, ವಿಂದು ದರಾ ಮೊದಲಾದವರು ಬಪ್ಪಿ ಲಹಿರಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ವಿಶೇಷ ಕಲಾಕೃತಿಯ ಮೂಲಕ ನಮನ ಸಲ್ಲಿಸಿದ ಖ್ಯಾತ ಮರುಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್:
ದೇಶದಲ್ಲಿ ಹಲವು ಅಭಿಮಾನಿಗಳು, ಕಲಾವಿದರು ಬಪ್ಪಿ ಲಹಿರಿಗೆ ವಿವಿಧ ರೂಪದಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ (Sudarshan Pattnaik) ಅವರು ಫೆಬ್ರವರಿ 16 ರಂದು ಪುರಿ ಕಡಲತೀರದಲ್ಲಿ ತಮ್ಮ ಮರಳು ಶಿಲ್ಪ ಕಲೆಯೊಂದಿಗೆ ಪ್ರಸಿದ್ಧ ಗಾಯಕ-ಸಂಯೋಜಕ ಬಪ್ಪಿ ಲಹಿರಿಗೆ ಗೌರವ ಸಲ್ಲಿಸಿದರು. ಅದರಲ್ಲಿ ಅವರು ‘ಯಾದ್ ಆ ರಹಾ ಹೈ ತೇರಾ ಪ್ಯಾರ್’ (ನಿಮ್ಮ ಪ್ರೀತಿ ನೆನಪಿಗೆ ಬರುತ್ತಿದೆ) ಎಂದು ಬರೆದಿದ್ದಾರೆ.
ಸುದರ್ಶನ್ ಪಟ್ನಾಯಕ್ ಮರುಳು ಶಿಲ್ಪ ಇಲ್ಲಿದೆ:
Yaad aa raha hai tera pyaar,
Kahaan hum kahaan tum, Huey tum kahaan goom ……..Yaad aata rahega tera pyaar!
Tribute to Disco king #BappiDa. My SandArt at Puri beach. pic.twitter.com/zKeM8Fbwby— Sudarsan Pattnaik (@sudarsansand) February 16, 2022
ಬಪ್ಪಿ ಲಹಿರಿ ಅವರು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದರು. 1986ರಲ್ಲಿ ತೆರೆಕಂಡ ‘ಕೃಷ್ಣಾ ನೀ ಬೇಗನೇ ಬಾರೋ’, ‘ಆಫ್ರಿಕಾದಲ್ಲಿ ಶೀಲ’ (1986), ‘ಗುರು’ (1989) ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ‘ಲವ್ ಇನ್ ಮಂಡ್ಯ’ ಚಿತ್ರದ ಗೀತೆಗೂ ಅವರು ಹಾಡಿದ್ದರು. ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಬಪ್ಪ ಲಹಿರಿ ಅವರದ್ದು ದೊಡ್ಡ ಹೆಸರಾಗಿತ್ತು. ಅವರು ಕೊನೆಯದಾಗಿ ಹಾಡಿದ್ದು ‘ಬಾಘಿ 3’ ಚಿತ್ರದ ’ಭಂಕಸ್’. ಗಾಯನ, ಸಂಗೀತ ನಿರ್ದೇಶನದ ಹೊರತಾಗಿ ಬಪ್ಪಿ ನಿರ್ಮಾಪಕರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಬಪ್ಪಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ