ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ಬೆಂಗಾಲಿ ನಟಿ ಎಂಡ್ರೀಲಾ ಶರ್ಮಾ ನಿಧನ
Aindrila Sharma: ಇತ್ತೀಚೆಗೆ ಒಂದೇ ದಿನ ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಬೆಂಗಾಲಿ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (24) ಭಾನುವಾರ (ನ.20) ನಿಧನ ಹೊಂದಿದ್ದಾರೆ.
ಇತ್ತೀಚೆಗೆ ಒಂದೇ ದಿನ ಹಲವು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಬೆಂಗಾಲಿ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (Aindrila Sharma) (24) ಭಾನುವಾರ (ನ.20) ನಿಧನ ಹೊಂದಿದ್ದಾರೆ. ಬ್ರೈನ್ ಸ್ಟ್ರೋಕ್‌ನಿಂದ ಬಳಲುತ್ತಿದ್ದ ಎಂಡ್ರೀಲಾ ಶರ್ಮಾ ಅವರನ್ನು ನ. 1 ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರ ಮೆದುಳಲ್ಲಿ ರಕ್ತಸ್ರಾವ ಕೂಡ ಉಂಟಾಗಿತ್ತು. ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದರು. ಸಿಟಿ ಸ್ಕ್ಯಾನ್ ವರದಿ ಪ್ರಕಾರ ನಟಿಯ ಮೆದುಳಿನ ಎದುರು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತ್ತು. ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ವೈದ್ಯರು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆದರೆ ಆಸ್ಪತ್ರೆಯ ಮೂಲಗಳ ಪ್ರಕಾರ ಇಂದು (ನ.20) ಮಧ್ಯಾಹ್ನ 12:59 ಕ್ಕೆ ಎಂಡ್ರೀಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಇತ್ತ ನಿಧನದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಾಲಿಯ ನಟ, ನಟಿಯರು ಸಹ ಕಂಬನಿ ಮಿಡಿದಿದ್ದಾರೆ.
ಈ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದಾಗ ಎಂಡ್ರೀಲಾ ಶರ್ಮಾ ಪ್ರಿಯಕರ, ನಟ ಸಬ್ಯಸಾಚಿ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ‘ಎಂಡ್ರೀಲಾ ಶರ್ಮಾಗಾಗಿ ದೇವರಲ್ಲಿ ಪಾರ್ಥಿಸಿ’ ಎಂದು ಫ್ಯಾನ್ಸ್ ಬಳಿ ವಿನಂತಿಸಿದ್ದರು. ಬಳಿಕ ಕೆಲ ಕಿಡಿಗೇಡಿಗಳು ಎಂಡ್ರೀಲಾ ಶರ್ಮಾ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಕೂಡ ಹಬ್ಬಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಟ ಸಬ್ಯಸಾಚಿ ಚೌಧರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಒಂದನ್ನು ಬರೆದಿದ್ದರು. ‘ಎಂಡ್ರೀಲಾ ಶರ್ಮಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
Bengali actor Aindrila Sharma passed away at the age of 24 in a private hospital in Howrah today after suffering multiple cardiac arrests last night.
(Photo source: Aindrila Sharma’s Facebook page) pic.twitter.com/iIyKvxGevh
— ANI (@ANI) November 20, 2022
ಅವರ ಹೃದಯ ಬಡಿತವು ಮುಂಚೆಗಿಂತ ಈಗ ಸುಧಾರಿಸಿದೆ. ಅವರ ರಕ್ತದೊತ್ತಡ ಕೂಡ ಸಾಮಾನ್ಯ ಸ್ಥಿತಿಗೆ ಬಂದಿದೆ. ಸದ್ಯ ಎಂಡ್ರೀಲಾ ಅವರು ಯಾವುದೇ ರೀತಿಯ ಬೆಂಬಲವಿಲ್ಲದೇ ತನಗೆ ಎದುರಾದ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ದಯಮಿಟ್ಟು ಇಲ್ಲಸಲ್ಲದ ವದಂತಿಯನ್ನು ಹಬ್ಬಿಸಬೇಡಿ’ ಎಂದು ಸಬ್ಯಸಾಚಿ ಚೌಧರಿ ಅವರು ಮನವಿ ಮಾಡಿಕೊಂಡಿದ್ದರು. ಆದರೆ ಆ ಸುಳ್ಳು ಸುದ್ದಿಯೇ ಇಂದು ನಿಜವಾಗಿ ಹೋಗಿದೆ.
ನಟಿ ಎಂಡ್ರೀಲಾ ಶರ್ಮಾ ಅವರಿಗೆ ಈ ಮೊದಲು ಕ್ಯಾನ್ಸರ್ ಉಂಟಾಗಿತ್ತು. ಅದನ್ನು ಅವರು ಜಯಿಸಿ ಬಂದಿದ್ದರು. ಆದರೆ ಈಗ ಅವರಿಗಾದ ಬ್ರೈನ್ ಸ್ಟ್ರೋಕ್ ಅವರ ಪ್ರಾಣವನ್ನೇ ಕಸಿದಿದೆ. ಎಂಡ್ರೀಲಾ ಶರ್ಮಾ ‘ಜುಮುರ್’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ‘ಜಿಬೊನ್ ಜೋತ್ಯಿ’, ‘ಜಿಯೋನ್ ಕಥಿ’ ಎಂಬ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.