‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಛಾವಣಿ ಕುಸಿತ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮದಿಂದ ಅವಘಡ ಸಂಭವಿಸಿದೆ. ಬೆಂಗಳೂರಿನ ಪೀಣ್ಯದಲ್ಲಿ ಇರುವ ‘ಭಾರತಿ’ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಬೆಂಗಳೂರಿನ ‘ಭಾರತಿ’ ಚಿತ್ರಮಂದಿರದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಪೆಟ್ಟಾಗಿದೆ. ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 30) ಸಂಜೆ ಜೋರಾಗಿ ಮಳೆ ಸುರಿದಿದೆ. ಇದರ ಪರಿಣಾಮವಾಗಿ ಚಿತ್ರಮಂದಿರದ ಛಾವಣಿ ಕುಸಿದಿದೆ. ಈ ಘಟನೆ ನಡೆದ ಕೂಡಲೇ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
‘ಪ್ರೇಮದ ಊರಲಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಪೀಣ್ಯದಲ್ಲಿರುವ ‘ಭಾರತಿ’ ಥಿಯೇಟರ್‌ನಲ್ಲೂ ಈ ಸಿನಿಮಾ ಪ್ರದರ್ಶನ ಆಗುತ್ತಿದೆ. ಆದರೆ ಮಧ್ಯಾಹ್ನದ ಶೋ ನೋಡಲು ಬಂದ ಪ್ರೇಕ್ಷಕರಿಗೆ ಈ ಘಟನೆಯಿಂದ ಶಾಕ್ ಆಗಿದೆ. ಚಿತ್ರಮಂದಿರದವರ ನಿರ್ಲಕ್ಷ್ಯದಿಂದಲೇ ಮೇಲ್ಭಾವಣಿ ಕುಸಿದಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.
‘ಮಧ್ಯಂತರಕ್ಕೂ ಕೆಲವೇ ನಿಮಿಷಗಳ ಮುಂಚೆ ಜೋರಾಗಿ ಮಳೆ ಬರುತ್ತಿತ್ತು. ಆಗ ಛಾವಣಿ ಬಿದ್ದ ಶಬ್ದ ಕೇಳಿಸಿತು. ಮಳೆಯಿಂದಾಗಿ ಶೀಟ್ ನೆನೆದು ಕೆಳಗೆ ಬಿದ್ದಿದೆ. ಅಲ್ಲಿ ಕುಳಿತಿದ್ದ ಮೂವರಿಗೆ ಗಾಯ ಆಗಿದೆ. ಇಬ್ಬರ ತಲೆ ಹಾಗೂ ಇನ್ನೊಬ್ಬರ ಕಾಲಿಗೆ ಪೆಟ್ಟಾಗಿದೆ. ತಲೆಯಿಂದ ರಕ್ತ ಸೋರುತ್ತಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ಚಿತ್ರಮಂದಿರದ ಪರದೆ ಹತ್ತಿರವೂ ಮಳೆ ನೀರು ಸೋರುತ್ತಿತ್ತು. ಒಂದು ವೇಳೆ ಇನ್ನೂ ಜೋರಾಗಿ ಮಳೆ ಬಂದಿದ್ದರೆ ಪೂರ್ತಿ ಬೀಳುವ ಸಾಧ್ಯತೆ ಇತ್ತು. ಈಗ ಪೊಲೀಸರು ಬಂದಿದ್ದಾರೆ. ಇದು ಚಿತ್ರಮಂದಿರದವರ ಅಜಾಗರೂಕತೆ ಎನಿಸುತ್ತದೆ. ಚಿತ್ರಮಂದಿರದ ಒಳಗೆ ಆಸನಗಳು ನೋಡಲು ಚೆನ್ನಾಗಿದೆ. ಆದರೆ ಮೇಲ್ಛಾವಣಿ ಪರಿಸ್ಥಿತಿ ಈ ರೀತಿ ಇದೆ’ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾಗೆ ಸಿಕ್ತು ಉತ್ತಮ ಪ್ರತಿಕ್ರಿಯೆ; ಏರಿಕೆ ಕಂಡ ಶೋಗಳ ಸಂಖ್ಯೆ
‘ಭಾರತಿ’ ಚಿತ್ರಮಂದಿರದ ಮೇಲ್ಭಾವಣಿ ಕುಸಿದ ಘಟನೆಯಿಂದ ಗಾಯಗೊಂಡ ಪ್ರೇಕ್ಷಕರ ಸ್ಥಿತಿ ಸದ್ಯಕ್ಕೆ ಹೇಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಚಿತ್ರಮಂದಿರದವರ ಪ್ರತಿಕ್ರಿಯೆಗಾಗಿ ನಿರೀಕ್ಷಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



