ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಹಿರಿಯ ನಟಿ ಚಂದ್ರಕಲಾ ಮೋಹನ್ ಅವರು ಈ ವಾರ ದೊಡ್ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈಗ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಈ ಹಿಂದಿನ ವಾರಗಳಲ್ಲಿ ಧನುಶ್ರೀ, ನಿರ್ಮಲಾ ಚೆನ್ನಪ್ಪ ಮತ್ತು ಗೀತಾ ಭಾರತಿ ಭಟ್ ಎಲಿಮಿನೇಟ್ ಆಗಿದ್ದರು.
ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಚಂದ್ರಕಲಾ ಮೋಹನ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎರಡನೇ ಹಿರಿಯ ಸ್ಪರ್ಧಿ ಆಗಿದ್ದರು. ಶಂಕರ್ ಅಶ್ವತ್ಥ್ ಹೊರತುಪಡಿಸಿ ಬೇರೆ ಸ್ಪರ್ಧಿಗಳ ಜೊತೆಗೆ ಚಂದ್ರಕಲಾ ಹೆಚ್ಚು ಬೆರೆಯುತ್ತಿರಲಿಲ್ಲ. ಅಡುಗೆ ಮನೆ ಕೆಲಸಗಳನ್ನು ಅವರು ಚೆನ್ನಾಗಿ ನಿಭಾಯಿಸಿ ಮೆಚ್ಚುಗೆ ಪಡೆದುಕೊಂಡಿದ್ದರು. ಚದುರಂಗದ ಆಟದಲ್ಲಿಯೂ ಅವರ ನಿರ್ಧಾರಗಳು ಚೆನ್ನಾಗಿದ್ದವು. ಆದರೆ ವಯಸ್ಸಿನ ಅಂತರದ ಕಾರಣದಿಂದ ಎಲ್ಲರ ಜೊತೆಗೂ ಹೆಚ್ಚು ಬೆರೆಯುವುದಿಲ್ಲ ಎಂಬ ಅಂಶವೇ ಅವರ ಎಲಿಮಿನೇಷನ್ಗೆ ಕಾರಣ ಆದಂತಿದೆ.
ಈ ವಾರ ಕ್ಯಾಪ್ಟನ್ ಅರವಿಂದ್ ಕೆ.ಪಿ. ಹೊರತುಪಡಿಸಿ ಎಲ್ಲ 13 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಹಾಗಾಗಿ ತಮ್ಮ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಆಕ್ರಮಣಕಾರಿಯಾಗಿ ಆಟ ಆಡುವುದು ಅನಿವಾರ್ಯವಾಗಿತ್ತು. ಅದರಲ್ಲಿ ಚಂದ್ರಕಲಾ ಕೂಡ ಹೆಚ್ಚು ಶ್ರಮವಹಿಸಿ ಟಾಸ್ಕ್ಗಳಲ್ಲಿ ಭಾಗವಹಿಸಿದ್ದರು. ಆದರೆ ವೀಕ್ಷಕರಿಂದ ಹೆಚ್ಚಿನ ವೋಟ್ ಪಡೆಯುವಲ್ಲಿ ಅವರು ಯಾಕೋ ಮುಗ್ಗರಿಸಿದಂತಿದೆ.
ಶನಿವಾರದ (ಮಾ.27) ಎಪಿಸೋಡ್ನಲ್ಲಿ ಚಂದ್ರಕಲಾ, ಪ್ರಶಾಂತ್ ಸಂಬರಗಿ, ವಿಶ್ವನಾಥ್, ಶಂಕರ್ ಅಶ್ವತ್ಥ್ ಮತ್ತು ಶಮಂತ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಸದಸ್ಯರು ಸೇಫ್ ಆಗಿದ್ದರು. ಅಂತಿಮವಾಗಿ ಚಂದ್ರಕಲಾ ಮೋಹನ್ ಅವರಿಗೆ ಅದೃಷ್ಟ ಕೈಕೊಟ್ಟಿದೆ. ಹಲವು ವರ್ಷಗಳಿಂದ ಕಿರುತೆರೆ ಧಾರಾವಾಹಿ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ವಯಸ್ಸಿಗೂ ಮೀರಿದ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.
ಈಗ ಚಂದ್ರಕಲಾ ಮೋಹನ್ ಕೂಡ ಬಿಗ್ ಬಾಸ್ನಿಂದ ಹೊರಬಂದಿರುವ ಪರಿಣಾಮ ದೊಡ್ಮನೆಯಲ್ಲಿ ಹೆಣ್ಮಕ್ಕಳ ಸಂಖ್ಯಾಬಲ ಕುಸಿಯುತ್ತಿದೆ. ಈ ಕುರಿತಂತೆ ಶುಭಾ ಪೂಂಜಾ ಮತ್ತು ನಿಧಿ ಸುಬ್ಬಯ್ಯ ಹಲವು ಬಾರಿ ಮಾತನಾಡಿಕೊಂಡಿದ್ದರು. ಕೇವಲ ಮಹಿಳಾ ಸ್ಪರ್ಧಿಗಳನ್ನೇ ಹೆಚ್ಚು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಅಂದುಕೊಂಡಿದ್ದು ಯಾಕೋ ನಿಜವಾಗುತ್ತಿರುವಂತಿದೆ.
ಇತ್ತೀಚಿನ ಎಪಿಸೋಡ್ನಲ್ಲಿ ಚಂದ್ರಕಲಾ ಅವರು ತಮ್ಮ ಬದುಕಿನ ಒಂದು ರಹಸ್ಯವನ್ನು ಹಂಚಿಕೊಂಡಿದ್ದರು. ತಾವು ಬಾಲ್ಯದಲ್ಲಿ ಇದ್ದಾಗ ಸ್ವಂತ ತಂದೆಯೇ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂಬ ನೋವಿನ ಘಟನೆಯನ್ನು ಅವರು ದೊಡ್ಮನೆಯಲ್ಲಿ ಬಹಿರಂಗಪಡಿಸಿದ್ದರು. ಆ ಸಂಗತಿಯನ್ನು ತಿಳಿದು ಮನೆಯ ಎಲ್ಲ ಸದಸ್ಯರು ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: ‘ಸ್ಕರ್ಟ್ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್ ಬಾಸ್ ಚಂದ್ರಕಲಾ ಬದುಕಿನ ಕಹಿ ಘಟನೆ!
Published On - 12:56 pm, Sun, 28 March 21