ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆಲ್ಲ ಎಲ್ಲರ ಬಣ್ಣ ಬಯಲಾಗುತ್ತಿದೆ. ಈಗ 8ನೇ ವಾರದಲ್ಲಿ ಆಟ ಮುಂದುವರಿದಿದೆ. ಯಾವ ಸ್ಪರ್ಧಿಯ ಗುಣ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಅದರಲ್ಲೂ ಪ್ರಶಾಂತ್ ಸಂಬರಗಿ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ ಎಂಬ ಸತ್ಯ ಕ್ಷಣಕ್ಷಣಕ್ಕೂ ಬಯಲಾಗುತ್ತಿದೆ. ಎಲ್ಲರನ್ನೂ ಯಾಮಾರಿಸಲು ಪ್ರಶಾಂತ್ ಸಂಬರಗಿ ಹೇಳಿದ ಒಂದು ಸುಳ್ಳನ್ನು ಈಗ ಬಿಗ್ ಬಾಸ್ ಬಯಲು ಮಾಡಿದ್ದಾರೆ.
ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಎಂಬ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ಯಾರು ವಿನ್ನರ್ ಎಂಬುದನ್ನು ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್ ಸಂಬರಗಿ ಸೇರಿ ನಿರ್ಣಯ ಮಾಡಬೇಕಿತ್ತು. ಅವರಿಬ್ಬರೂ ಹಾಸ್ಟೆಲ್ ವಾರ್ಡನ್ಗಳಾಗಿದ್ದರು. ಅಂತಿಮವಾಗಿ ದಿವ್ಯಾ ಸುರೇಶ್ ವಿನ್ನರ್ ಎಂದು ಘೋಷಣೆ ಮಾಡಿದರು. ಈ ಬಗ್ಗೆ ಬಾಯ್ಸ್ ಹಾಸ್ಟೆಲ್ ಸದಸ್ಯರು ತಕರಾರು ತೆಗೆದರು. ಹುಡುಗರ ಪರವಾಗಿ ನಿಲ್ಲಬೇಕಿದ್ದ ಪ್ರಶಾಂತ್ ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಕೇಳಿಬಂತು. ಅದರಿಂದ ತಪ್ಪಿಸಿಕೊಳ್ಳಲು ಪ್ರಶಾಂತ್ ಒಂದು ಸುಳ್ಳು ಹೇಳಿದರು.
‘ಹುಡುಗರ ಹೆಸರು ಹೇಳಲು ನಿಧಿ ಬಿಡಲಿಲ್ಲ. ಅವರು ನನ್ನ ಬಾಯಿ ಮುಚ್ಚಿಸಿದರು. ವಾದ ಮಾಡಲು ಅವಕಾಶ ನೀಡಲಿಲ್ಲ. ನಿಧಿ ಫೋರ್ಸ್ ಮಾಡಿದರು. ದಿವ್ಯಾ ಸುರೇಶ್ ಅತ್ಯುತ್ತಮ ಎಂದು ಒತ್ತಾಯ ಹೇರಿದರು’ ಎಂದ ಪ್ರಶಾಂತ್ ಅವರು ಹುಡುಗರ ಎದುರು ಹೇಳಿದರು. ಆದರೆ ಅಲ್ಲಿ ನಿಧಿ ಜೊತೆ ನಡೆದ ಮಾತುಕತೆಯೇ ಬೇರೆ ಇತ್ತು! ಅದನ್ನು ಬಿಗ್ ಬಾಸ್ ಮನೆಯ ಕ್ಯಾಮರಾಗಳು ನಿಖರವಾಗಿ ಸೆರೆ ಹಿಡಿದಿವೆ.
ಕ್ಯಾಮರಾಗಳಲ್ಲಿ ಸೆರೆ ಆಗಿರುವ ಆ ವಿಡಿಯೋವನ್ನು ಈ ವಾರದ ಕ್ಯಾಪ್ಟನ್ ಆಗಿರುವ ಅರವಿಂದ್ ಕೆ.ಪಿ. ಅವರಿಗೆ ಬಿಗ್ ಬಾಸ್ ರಹಸ್ಯವಾಗಿ ತೋರಿಸಿದ್ದಾರೆ. ಕನ್ಫೆಷನ್ ರೂಮ್ಗೆ ಕರೆದು ಅರವಿಂದ್ಗೆ ಮಾತ್ರ ಆ ವಿಡಿಯೋವನ್ನು ತೋರಿಸಲಾಗಿದೆ. ಅದರಿಂದ ಅರವಿಂದ್ಗೆ ಎಲ್ಲಾ ಸತ್ಯ ತಿಳಿದಂತಾಗಿದೆ. ಪ್ರಶಾಂತ್ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಬಿಗ್ ಬಾಸ್ ವಿಡಿಯೋ ಸಮೇತ ಸಾಬೀತು ಮಾಡಿದ್ದಾರೆ. ಆ ಮೂಲಕ ವೀಕ್ಷಕರಿಗೂ ಎಲ್ಲ ಸತ್ಯ ಗೊತ್ತಾದಂತಾಗಿದೆ.
ಈ ಹಿಂದೆ ಕೂಡ ಪ್ರಶಾಂತ್ ಈ ರೀತಿಯ ಸುಳ್ಳುಗಳನ್ನು ಹೇಳಿದ್ದುಂಟು. ಮೊದಲು ತುಪ್ಪ ಖಾಲಿ ಮಾಡಿ, ಆಮೇಲೆ ನಾನು ತುಪ್ಪವನ್ನೇ ತಿಂದಿಲ್ಲ ಎಂದು ಎಲ್ಲರ ಮುಂದೆ ಸುಳ್ಳು ಹೇಳಿದ್ದರು. ಅವರ ಆಪ್ತ ಸ್ನೇಹಿತರಾಗಿರುವ ಚಕ್ರವರ್ತಿ ಚಂದ್ರಚೂಡ್ ಕೂಡ ಅನೇಕ ಬಾರಿ ಸಂಬರಗಿಯ ಸುಳ್ಳು ಹೇಳುವ ಗುಣದ ಬಗ್ಗೆ ಮಾತನಾಡಿದ್ದುಂಟು. ಈಗ ಅರವಿಂದ್ಗೆ ಬಿಗ್ ಬಾಸ್ ತೋರಿಸಿರುವ ವಿಡಿಯೋ ಮೂಲಕ ಪ್ರಶಾಂತ್ ಸಂಬರಗಿಯ ಈ ಚಾಳಿಗೆ ಬಲವಾದ ಪುರಾವೆ ಸಿಕ್ಕಂತಾಗಿದೆ. ಇದರಿಂದ ಅವರಿಗೆ ವೀಕ್ಷಕರ ವೋಟ್ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?